ಸಿದ್ದು, ಶೆಟ್ಟರ್ ಸೇರಿ ಈ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಿವಣ್ಣ ಪ್ರಚಾರ: ಯಾರು ತಿಳಿಯಿರಿ?
ಬೆಂಗಳೂರು, ಮೇ 01: ಮೇ 10 ರಂದು ಕರ್ನಾಟಕ ವಿಧಾನಸಭೆ ನಡೆಯಲಿದೆ. ಹಲವು ಸಿನಿ ತಾರೆಯರು ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಅವರು ಸೊರಬ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಭಾನುವಾರ ಪ್ರಚಾರ ನಡೆಸಿದರು. ಔಪಚಾರಿಕವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲವೆಂದು ಶಿವರಾಜ್‌ಕುಮಾರ್ ಇದೇ ವೇಳೆ ಹೇಳಿದರು.
ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆ ನಡೆಸಿದ ಬಳಿಕ ಶಿವರಾಜ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

'ನನ್ನ ಪತ್ನಿ ಗೀತಾ ಕಾಂಗ್ರೆಸ್ ಸೇರಿದ್ದಾರೆ. ನನಗೆ ರಾಜಕೀಯದ ಜ್ಞಾನವಿಲ್ಲ. ಎಲ್ಲಾ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಅವರ ಪರ ಪ್ರಚಾರ ಮಾಡುತ್ತಿದ್ದೇನೆ' ಎಂದು ಶಿವರಾಜ್‌ಕುಮಾರ್ ಹೇಳಿದರು.
ಶೂಟಿಂಗ್ ಶೆಡ್ಯೂಲ್‌ಗಳಲ್ಲಿ ಬ್ಯುಸಿಯಾಗಿರುವ ಕಾರಣ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತಿಲ್ಲ ಹೀಗಾಗಿ ಪ್ರಚಾರಕ್ಕೆ ಸೀಮಿತವಾಗಿದ್ದೇನೆ ಎಂದು ಶಿವರಾಜಕುಮಾರ್ ತಿಳಿಸಿದರು.
ವರುಣಾದಲ್ಲಿ ಸಿದ್ದರಾಮಯ್ಯ, ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್, ಜೇವರ್ಗಿಯಲ್ಲಿ ವಿಜಯ್ ಸಿಂಗ್ ಹಾಗೂ ಬೀದರ್ ದಕ್ಷಿಣದಲ್ಲಿ ಅಶೋಕ್ ಖೇಣಿ ಪರ ಪ್ರಚಾರ ನಡೆಸುವುದಾಗಿ ಶಿವರಾಜ್‌ಕುಮಾರ್ ಮಾಹಿತಿ ನೀಡಿದರು.

ಜಗದೀಶ್ ಶೆಟ್ಟರ್ ಅವರು ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹುಬ್ಬಳ್ಳಿಯಲ್ಲಿ ಶೂಟಿಂಗ್ ಇದ್ದಾಗಲೆಲ್ಲ ಶೆಟ್ಟರ್ ಮನೆಗೆ ತಿಂಡಿ ತಿಂದು ಬರುತ್ತಿದ್ದರು ಎಂದು ಶಿವರಾಜ್‌ಕುಮಾರ್ ಹೇಳಿದರು.
ಶಿವರಾಜಕುಮಾರ್ ಅವರ ಪತ್ನಿ ಗೀತಾ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದರು. ದಂಪತಿ ಶನಿವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಗೀತಾ ಅವರ ಕಿರಿಯ ಸಹೋದರ ಮತ್ತು ಸೊರಬ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ.
ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗದ ಮಲೆನಾಡು ಪ್ರದೇಶದಲ್ಲಿ ಶಿವರಾಜ್‌ಕುಮಾರ್‌ಗೆ ಅಪಾರ ಅಭಿಮಾನಿ ಬಳಗ ಇರುವುದರಿಂದ ಅದು ಕಾಂಗ್ರೆಸ್‌ಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ನನಗೆ ಖುಷಿ ತಂದಿದೆ. ಮಧು ಹಾಗೂ ಅವರ ಸಹೋದರ ಮಾವ ಭೀಮಣ್ಣ ನಾಯ್ಕ ಪರ ನಾವು ಶಿರಸಿಯಲ್ಲಿ ಪ್ರಚಾರ ನಡೆಸಲಿದ್ದೇವೆ ಎಂದು ಶಿವರಾಜಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಹಾಲಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿದಿದ್ದಾರೆ. ಗೀತಾ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ. ಡಾ ರಾಜಕುಮಾರ್ ಅವರ ಸೊಸೆ.












Click it and Unblock the Notifications