Karnataka By Election: ಅ.22ರಂದು ಕಾಂಗ್ರೆಸ್ 3 ಅಭ್ಯರ್ಥಿಗಳು ಘೋಷಣೆ: ಸಚಿವ
ಧಾರವಾಡ, ಅಕ್ಟೋಬರ್ 21: ರಾಜ್ಯದಲ್ಲಿ ಉಪಚುನಾವಣೆ ಕಾವು ಏರತೊಡಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಎರಡು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಆಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ಸಚಿವರು, ಸ್ಥಳೀಯ ನಾಯಕರ ಅಭಿಪ್ರಾಯ ಕೇಳಲು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದರು. ಸಭೆಗೆ ಹೋದ ನಾವು ಅಭಿಪ್ರಾಯ ತಿಳಿಸಿದ್ದೇವೆ. ಮಂಗಳವಾರ ಅಭ್ಯರ್ಥಿಗಳ ಘೋಷಣೆ ಆಗಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಧಾರವಾಡದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿದಂತೆ ರಾಜ್ಯದ ಮೂರು ವಿಧಾನ ಸಭಾ ಉಪ ಚುನಾವಣೆಯ ಟಿಕೆಟ್ ಘೋಷಣೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾನುವಾರೆ ಸಭೆ ನಡೆಸಿದ್ದಾರೆ. ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಭೆಗೆ ಹಾಜರಾದ ನಾವೆಲ್ಲವರೂ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಮ್ಮ ಅಭಿಪ್ರಾಯ ಮಂಡನೆ ಮಾಡಿದ್ದೇವೆ. ಇನ್ನೂ ಉಪ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಪಕ್ಷದಲ್ಲಿ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು, ಮಂಗಳವಾರ ಹೈಕಮಾಂಡ್ ನಿಂದ ಅಂತಿಮ ತೀರ್ಮಾನ ಬರಲಿದೆ. ಶಿಗ್ಗಾಂವಿ ಟಿಕೆಟ್ ನಲ್ಲಿಯೂ ಗೊಂದಲ ವಿಚಾರದಲ್ಲಿ ಸಹ ನಮ್ಮ ನಮ್ಮ ಅಭಿಪ್ರಾಯ ಈಗಾಗಲೇ ತಿಳಿಸಿದ್ದೇವೆ ಎಂದರು.
ಅಂತಿಮವಾಗಿ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿರದರೂ ಅದೇ ಫೈನಲ್ ಆಗಿರುತ್ತದೆ. ಮಂಡ್ಯ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿಜೆಪಿ ಸಿ.ಪಿ. ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಕರೆತರುವ ಚರ್ಚೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ಭಾಗದ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಪಕ್ಷದ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಲ್ಲಿನ ಜವಾಬ್ದಾರಿ ಇದೆ, ಮುಖ್ಯಮಂತ್ರಿಗಳಿಗೂ ಅಲ್ಲಿನ ಜವಾಬ್ದಾರಿ ಇದೆ ಎಂದಷ್ಟು ತಿಳಿಸಿದರು.
ಗೊಂದಲವಾಗದಂತೆ ಹೈಕಮಾಂಡ್ ಅಂತಿಮ ನಿರ್ಧಾರಕ್ಕೆ ಬರಲಿದೆ. ಈ ಬಗ್ಗೆ ಎಲ್ಲ ಮಾಹಿತಿ ನನಗಿಲ್ಲ. ಈ ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಯಲ್ಲಿ
ಚನ್ನಪಟ್ಟಣದಲ್ಲಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಲೀಡ್‌ನಲ್ಲಿತ್ತು. ಶಿಗ್ಗಾಂವಿ ಸಹ ಲೀಡ್ ಗೆ ಬಂದಿತ್ತು. ಅದಕ್ಕಿಂತ ಬಳ್ಳಾರಿ ಜಿಲ್ಲೆಯ ಸಂಡೂರು ಸಹ ಎರಡು ಬಾರಿ ಲೀಡ್ ನಲ್ಲಿದ್ದೇವೆ. ಹೀಗಾಗಿ ನಗೆ ನಂಬಿಕೆ ಇದೆ ಇದರ ಆಧಾರದ ಮೇಲೆ ಮೂರಕ್ಕೆ ಮೂರು ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ಬರ್ತಾರಾ ಸಿಪಿವೈ
ಸಚಿವ ಹೇಳಿಕೆ ನೋಡಿದರೆ ನಾಳೆ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಯತ್ನ ನಡೆಯುತ್ತಿದೆ. ಇದು ನಿಜವೇ ಆದಲ್ಲಿ ನಾಳೆ ಮಂಗಳವಾರ ಎರಡು ಕ್ಷೇತ್ರಗಳಿಗೆ ಮಾತ್ರವೇ ಟಿಕೆಟ್ ಘೋಷಿಸಿ ಚನ್ನಪಟ್ಟಣದಲ್ಲಿ ಕಾದು ನೋಡುವ ತಂತ್ರ ಮಾಡಬಹು ಎಂಬ ಮಾತುಗಳ ಕೇಳಿ ಬರುತ್ತಿವೆ.












Click it and Unblock the Notifications