Karnataka By Election: ಶಿಗ್ಗಾವಿ ಬಿಜೆಪಿ ಟಿಕೆಟ್ ಸಿಕ್ಕಿದ್ದೇಗೆ? ಭರತ್ ಬೊಮ್ಮಾಯಿ ಫಸ್ಟ್ ರಿಯಾಕ್ಷನ್
ಬೆಂಗಳೂರು, ಅಕ್ಟೋಬರ್ 20: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ. ಮತದಾನಕ್ಕೆ ಮಹೂರ್ತ ಫಿಕ್ಷ ಆಗುತ್ತಿದ್ದಂತೆ ಚನ್ನಪಟ್ಟಣ ಬಿಟ್ಟು ಉಳಿದ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ಕುಟುಂಬ ರಾಜಕಾರಣದ ಕಿಡಿ ಹೊತ್ತಿಸಿದೆ. ಈ ಟಿಕೆಟ್ ಸಿಕ್ಕಿದ್ದು ಹೇಗೆ ಎಂದು ಸ್ವತಃ ಭರತ್ ಬೊಮ್ಮಾಯಿ ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅವರಿಗೆ ಅಭಿನಂದನೆ ತಿಳಿಸಿದರು.

ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿದ ಕೇಂದ್ರ ನಾಯಕರಿಗೆ, ರಾಜ್ಯದ ನಾಯಕರಾದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶು ಅವರಿಗೆ ಧನ್ಯವಾದ ಹೇಳಿದ್ದಾರೆ.
ಶಿಗ್ಗಾವಿ ಟಿಕೆಟ್ ಸಿಕ್ಕಿದ್ದೇಗೆ?
ನಮ್ಮ ತಂದೆ ತಾಯಿಯ ಆಶೀರ್ವಾದದ ಫಲದಿಂದ ನನಗೆ ಈ ಅವಕಾಶ ಸಿಕ್ಕಿದೆ. ನಮ್ಮ ತಂದೆ ಶಿಗ್ಗಾವಿ ಸವಣೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು, ಅಲ್ಲಿನ ಜನರ ಅಪೇಕ್ಷೆಯಂತೆ ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಲಾಗಿದೆ.
ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ. ಶಿಗ್ಗಾವಿ ಸವಣೂರಿನ ಜನತೆಯ ಕಷ್ಟ ಸುಖದಲ್ಲಿ ನಾನು ಸದಾಕಾಲ ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಯಾವ ಮಾನದಂಡದಲ್ಲಿ ಟಿಕೆಟ್ ಸಿಕ್ಕಿದೆ?
ತಮಗೆ ಯಾವ ಮಾನದಂಡದಲ್ಲಿ ಟಿಕೆಟ್ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರ ಬಳಿ ಟಿಕೆಟ್ ಕೇಳಿರಲಿಲ್ಲ. ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ. ಕೇಂದ್ರ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದು ಅವರು ಟಿಕೆಟ್ ಪಡೆಯುವಲ್ಲಿ ತಂದೆ ಬಸವರಾಜ ಬೊಮ್ಮಾಯಿ, ತಮ್ಮ ಪಾತ್ರ ಇಲ್ಲ ಎಂದು ಅವರು ಸ್ಪಷ್ಟಿಸಿದರು.
ನಾನು 2018 ರಿಂದ ತಂದೆಯ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇನೆ. ಕಳೆದ ಎಂಪಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಓಡಾಡಿದ್ದು, ಜನರ ನಾಡಿಮಿಡಿತ ಗೊತ್ತಿದೆ. ನಿರಂತರವಾಈಗ ಶಿಗ್ಗಾವಿ ಸವಣೂರು ಕ್ಷೇತ್ರದ ಎಲ್ಲ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ತಂದೆಯವರು ಸಚಿವರಿದ್ದಾಗ ಸಿಎಂ ಇದ್ದಾಗ ನಾನು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಎಂದು ಅವರು ತಮ್ಮ ರಾಜಕೀಯ ಅನುಭವ ಹೇಳಿಕೊಂಡಿದ್ದಾರೆ.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರೆಲ್ಲರೂ ನಮ್ಮೊಂದಿಗಿದ್ದಾರೆ. ಎಲ್ಲರೂ ಸೇರಿಯೇ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ. ಯಾವುದೇ ಉಪ ಚುನಾವಣೆ ಎದುರಿಸುವುದು ಕಷ್ಟಾನೇ, ಆದರೆ ನಮ್ಮ ತಂದೆಯವರು ಮಾಡಿದ ಕೆಲಸ ಹಾಗೂ ನಾನು ತಂದೆಯವರ ಜೊತೆಗೆ ಕೆಲಸ ಮಾಡಿದ್ದರಿಂದ ಶಿಗ್ಗಾವಿ ಸವಣೂರಿನ ಜನರು ನನಗೆ ಆಶೀರ್ವಾದ ಮಾಡುವ ವಿಶ್ವಾಸ ನನಗಿದೆ ಎಂದು ಅವರು ವಿವರಿಸಿದರು.












Click it and Unblock the Notifications