ಜೆಡಿಎಸ್ ಬಿಟ್ಟು ಶಶಿಭೂಷಣ ಹೆಗಡೆ ಬಿಜೆಪಿ ಸೇರ್ಪಡೆ
ಬೆಂಗಳೂರು, ಏಪ್ರಿಲ್ 03; ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಮೊಮ್ಮಗ ಮತ್ತು ಜೆಡಿಎಸ್ ಮುಖಂಡ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಬಿಜೆಪಿ ಸೇರಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಸೋಮವಾರ ದಿ. ರಾಮಕೃಷ್ಣ ಹೆಗಡೆ ಅಣ್ಣ ಗಣೇಶ ಹೆಗಡೆಯವರ ಪುತ್ರ ಡಾ. ಶಶಿಭೂಷಣ ಹೆಗಡೆ ಬಿಜೆಪಿ ಸೇರಿದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕೇಂದ್ರ ಸಚಿವ ಭಗವಂಗ್ ಖೂಬಾ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಕುರಿತು ಡಾ. ಶಶಿಭೂಷಣ ಹೆಗಡೆ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.

'ಆತ್ಮೀಯರೇ , ನನ್ನೆಲ್ಲ ಆತ್ಮೀಯರು , ಹಿತೈಷಿಗಳು , ಬೆಂಬಲಿಗರ ಅಭಿಪ್ರಾಯ ಮತ್ತು ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ, ಶ್ರೀಯುತ ಬಿ. ಎಸ್. ಯಡಿಯೂರಪ್ಪಅವರು, ಗೋವಿಂದ ಕಾರಜೋಳ , ಶೋಭಾ ಕರಂದ್ಲಾಜೆ, ಬಸವರಾಜ ಹೊರಟ್ಟಿ ಹಾಗೂ ಬಿಜೆಪಿಯ ಜಿಲ್ಲೆಯ ಅನೇಕ ನಾಯಕರ ಆತ್ಮೀಯ ಆಹ್ವಾನದ ಮೇರೆಗೆ ಹಲವು ಜನ ಸಂಗಡಿಗರೊಂದಿಗೆ ದೇಶದ ಅಪ್ರತಿಮ ನೇತಾರ ಸನ್ಮಾನ್ಯ ನರೇಂದ್ರ ಮೋದಿಜಿ ಅವರ ಪ್ರೇರಣೆಯೊಂದಿಗೆ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ . ಹಿಂದಿನಂತೆ ನನ್ನೆಲ್ಲ ಆತ್ಮೀಯರ ಶುಭ ಹಾರೈಕೆ, ಬೆಂಬಲ ಮುಂದೆಯೂ ಇರಲಿ, ನಿಮ್ಮ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲಿದ್ದೇನೆ' ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಜೆಡಿಎಸ್ ಪಕ್ಷದಲ್ಲಿದ್ದರು. 2018ರ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. 26,625 ಮತಗಳನ್ನು ಪಡೆದು 70,595 ಮತಗಳನ್ನು ಪಡೆದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಎದುರು ಸೋಲು ಕಂಡಿದ್ದರು. ಚುನಾವಣೆಯಲ್ಲಿ 3ನೇ ಸ್ಥಾನವನ್ನು ಪಡೆದಿದ್ದರು.

ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಡಾ. ಶಶಿಭೂಷಣ ಹೆಗಡೆ ಪಕ್ಷ ಸೇರ್ಪಡೆ ಕುರಿತು ಪೋಸ್ಟ್ ಹಾಕಿದ್ದು, 'ಮೌಲ್ಯಾಧಾರಿತ ರಾಜಕಾರಣದ ಮೇರು ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಮೊಮ್ಮಗ ಶ್ರೀ ಶಶಿಭೂಷಣ ಹೆಗಡೆ ಅವರ ಬಿಜೆಪಿ ಸೇರ್ಪಡೆ ಸಂತಸ ತಂದಿದೆ. ಶೈಕ್ಷಣಿಕ ರಂಗದಲ್ಲಿ ತನ್ನದೆ ಆದ ಕಾರ್ಯ ಚಟುವಟಿಕೆ ಹೊಂದಿರುವ ಶಶಿಭೂಷಣ್ ಪಕ್ಷಕ್ಕೆ ಶಕ್ತಿ ನೀಡಬಲ್ಲರು. ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ನಾನು ಆತ್ಮೀಯವಾಗಿ ಸ್ವಾಗತಿಸುತ್ತೇನೆ' ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿದ್ದರು; ಡಾ. ಶಶಿಭೂಷಣ ಹೆಗಡೆ ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದರು. 2004ರ ಚುನಾವಣೆಯಲ್ಲಿ ಅವರು ಕುಮಟಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. 31,273 ಮತಗಳನ್ನು ಪಡೆದು ಕಾಂಗ್ರೆಸ್‌ನ ಮೋಹನ್ ಕೃಷ್ಣ ಶೆಟ್ಟಿ ವಿರುದ್ಧ ಸೋಲು ಕಂಡಿದ್ದರು. 2008ರಲ್ಲಿ ಮತ್ತೆ ಕುಮಟಾದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು 30,201 ಮತಗಳನ್ನು ಪಡೆದು ಜೆಡಿಎಸ್‌ನ ದಿನಕರ್ ಶೆಟ್ಟಿ ವಿರುದ್ಧ ಸೋತಿದ್ದರು.
2013ರ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 39,761 ಮತಗಳನ್ನು ಪಡೆದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ (42,854) ವಿರುದ್ಧ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿದ್ದರು. ಆದರೆ ಈಗ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಗೆ ಮರಳಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಇಲ್ಲ?; ಶಿರಸಿ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿಗಳ ನಡುವೆಯೇ ಡಾ. ಶಶಿಭೂಷಣ ಹೆಗಡೆ ಬಿಜೆಪಿ ಸೇರ್ಪಡೆ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಕಾಗೇರಿ ಬದಲು ಡಾ. ಶಶಿಭೂಷಣ ಹೆಗಡೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ? ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸುವುದು ಕಷ್ಟ.
ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಆರೋಗ್ಯದ ಕಾರಣ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅವರ ಬದಲು ಡಾ. ಶಶಿಭೂಷಣ ಹೆಗಡೆಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಇವೆ. ಚುನಾವಣೆಯಲ್ಲಿ ಸತತ ಸೋಲು ಕಂಡ ಡಾ. ಶಶಿಭೂಷಣ ಹೆಗಡೆ ಚುನಾವಣೆಯಿಂದ ದೂರ ಸರಿಯುವ ಮಾತು ಆಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಇತ್ತು. ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್‌ನ ನಾಯಕರಲ್ಲಿ ಡಾ. ಶಶಿಭೂಷಣ ಹೆಗಡೆ, ಆನಂದ್ ಅಸ್ನೋಟಿಕರ್ ಇಬ್ಬರು ಪ್ರಮುಖರು. ಈಗ ಡಾ. ಶಶಿಭೂಷಣ ಹೆಗಡೆ ಬಿಜೆಪಿ ಸೇರಿದ್ದು, ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications