Shamitha Malnad: ನಟ ದರ್ಶನ್ ಬಗ್ಗೆ ಖ್ಯಾತ ಸಂಗೀತ ಗಾಯಕಿ ಮಾಡಿದ ಪೋಸ್ಟ್ ಭಾರೀ ವೈರಲ್
ಬೆಂಗಳೂರು, ಜೂನ್, 29: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳು ಜೈಲು ಸೇರಿದ್ದಾರೆ. ಇನ್ನೂ ಈ ಬಗ್ಗೆ ಈಗಾಗಲೇ ಹಲವರು ಸಿನಿ ತಾರೆಯರು, ರಾಜಕೀಯ ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಇದೀಗ ಖ್ಯಾತ ಸಂಗೀತ ಗಾಯಕಿಯೊರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈ ನಡುವೆಯೇ ಹಲವರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ದರ್ಶನ್ ವಿರುದ್ಧ ಆಕ್ರೋಶ ಹೊರ ಹಾಕಿದರೆ, ಇನ್ನೂ ಕೆಲವರು ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಹೀಗೆ ದರ್ಶನ್ ಪರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

ಇದೀಗ ಪ್ರಕರಣದ ಎ2 ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಪರ ಗಾಯಕಿ, ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿಯಾಗಿ, ಶುದ್ಧವಾಗಿ ಬರಲು ಸಮಯ ಬೇಕೆಂದು," ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಶನ್ ಪ್ರಕರಣದ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಶಮಿತಾ ಮಲ್ನಾಡ್ ಅವರು, "ಮನಸೇ ಮನಸೇ.. ಸೋಲೋ ಗೆಲುವೋ.. ನೋವೋ ನಲಿವೋ.. ಏಳೋ ಬೀಳೋ.. ಕಲ್ಲೋ ಮುಳ್ಳೋ.. ಜೀವನದ ಹಾದಿ ಸುಲಭವಲ್ಲ. ಯಶಸ್ಸಿನ ಹಾದಿ ಸುಗಮವಲ್ಲ. ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು ದರ್ಶನ್ ತೂಗುದೀಪ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು. ಒಳ್ಳೆಯ ಕೆಲಸಗಳಿಗೆ ಕೈಚಾಚಿದ್ದವರು. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡ. ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು," ಎಂದು ಹೇಳಿಕೊಂಡಿದ್ದಾರೆ.
"ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು. ತಪ್ಪಾಗಿದೆಯೋ ಇಲ್ಲವೋ.. ಏನಾಗಿದೆ ಎಂದು ಅರಿಯದವರು ನಾವು. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು, ತಪ್ಪಾಗಿದ್ದರೆ ನ್ಯಾಯಾಂಗ ಇದೆ. ಕಾನೂನಿದೆ ಶಿಕ್ಷೆ ಇದೆ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ನೆರವು, ಆಸರೆ, ನ್ಯಾಯ ಬೇಕಿದೆ. ಹಾಗೆಯೇ ಸಾಮಾಜಿ ಜಾಲತಾಣವನ್ನು ಒಳ್ಳೆಯ ವಿಚಾರದ ಚರ್ಚೆಗಷ್ಟೇ ಬಳಸಿ," ಎಂದು ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಮಾಧ್ಯಮವನ್ನು ಒಳಿತಿಗಾಗಿ ಉಪಯೋಗಿಸಿ, ಎಲ್ಲರ ಮೇಲೆ ಗೌರವವಿರಲಿ, ಕಾಮೆಂಟ್ಸ್, ಪೋಸ್ಟ್ ಮೇಲೆ ಹಿಡಿತವಿರಲಿ. ದರ್ಶನ್ ಅಣ್ಣಾ, ಕನ್ನಡದ ಕುಟುಂಬ, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ, ಕಲಾವಿದರ ಕುಟುಂಬ, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಹಾಗೆ ಪ್ರೀತಿ ಅಭಿಮಾನ ಬದಲಾಗದು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.
ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು. ಸಮಾಧಾನದಿಂದ ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ ಅಂತಾ ಬರೆದುಕೊಂಡು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications