ಕರ್ನಾಟಕ ಸಾರಿಗೆಗಳಿಗೆ 'ಶಕ್ತಿ' ಇಲ್ಲ, ರೂ.4220 ಕೋಟಿ ಬಾಕಿ ಆರೋಪ: ಇಲಾಖೆ ಅಭಿವೃದ್ಧಿ ಲೆಕ್ಕ ಕೊಟ್ಟ ಕಾಂಗ್ರೆಸ್
ಬೆಂಗಳೂರು: ಕರ್ನಾಟಕದಲ್ಲಿ 'ಶಕ್ತಿ ಯೋಜನೆ' ಜಾರಿಗೆ ಬಂದಾಗಿನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸರಿಯಾಗಿ ಟಿಕೆಟ್ ಹಣ ನೀಡುತ್ತಿಲ್ಲ. ಇದರಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ 'ಶಕ್ತಿ' ಕಳೆದುಕೊಂಡಿವೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಾರಿಗೆ ಸಂಸ್ಥೆಗಳ ರೂ.4220 ಕೋಟಿ ಬಾಕಿ ಉಳಿಸಿಕೊಳ್ಳುವ ಮೂಲಕ ಸರ್ಕಾರ ನಿಗಮಗಳ 'ಶಕ್ತಿ' ಕುಂದಿಸಿದೆ ಎಂದು ದೂರಿದ್ದಾರೆ. ಇಕ್ಕೆ ರಾಜ್ಯ ಕಾಂಗ್ರೆಸ್ ಇಲಾಖೆಯ ಅಭಿವೃದ್ಧಿ ಲೆಕ್ಕ ನೀಡಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, ನೀವು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರಲು ನಾಲಾಯಕ್ ಎಂಬುದಕ್ಕೆ ನಿಮ್ಮ ಈ ಟ್ವೀಟ್ ಸಾಕ್ಷಿ. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಟೀಕೆ ಮಾಡಬೇಕಾದರೆ ಸಮಗ್ರ ಅಧ್ಯಯನದ ಅಗತ್ಯವಿರುತ್ತದೆ. ಅದು ನಿಮಗಿಲ್ಲ. ಗ್ಯಾರಂಟಿ ಯೋಜನೆಗಳ ಮೇಲೆ ನಿಮಗಿರುವ ಅಸೂಯೆ ನಿಮ್ಮ ಪೋಸ್ಟ್‌ನಲ್ಲಿ ವ್ಯಕ್ತವಾಗಿದೆ.

ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಯೋಜನೆ ಶಕ್ತಿ ಯೋಜನೆ. ಇದರಿಂದ ಸಾರಿಗೆ ನಿಗಮಗಳ ಶಕ್ತಿ ಕುಂದಿದೆ ಎಂಬ ನಿಮ್ಮ ವಾದ ಹಾಸ್ಯಸ್ಪದ. ನಿಮ್ಮ ಅಧ್ಯಯನದ ಕೊರತೆ ನಾವು ನೀಗಿಸುತ್ತೇವೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಬಿಜೆಪಿ ಅವಧಿಯಲ್ಲಿ ಶಕ್ತಿ ಯೋಜನೆಯೇ ಇರಲಿಲ್ಲ. ಆದರೂ ಏಕೆ 2023 ರಲ್ಲಿ ರೂ 5900 ಕೋಟಿ ಸಾಲ ಬಿಟ್ಟು ಹೋಗಿದ್ದೀರಾ? ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಶೋಚನೀಯ ಸ್ಥಿತಿ ಹೇಗಿತ್ತು ಎಂಬುದನ್ನು ಕಾಂಗ್ರೆಸ್ ನೆನಪಿಸಿದೆ.
ಸಾರಿಗೆ ಇಲಾಖೆಯಲ್ಲಿ ಅಭಿವೃದ್ಧಿ: ಲೆಕ್ಕ ಕೊಟ್ಟ ಕಾಂಗ್ರೆಸ್
ಕಾಂಗ್ರೆಸ್ ಬಂದ ಮೇಲೆ 7800 ಹೊಸ ಬಸ್ಸುಗಳ ಸೇರ್ಪಡೆ ಆಗಿದೆ. 10000 ನೇಮಕಾತಿ ನಡೆದಿದ್ದು, 1200 ಮಂದಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಲಾಗಿದೆ. 2400 ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ ಕಾರ್ಯ, ಡೀಸೆಲ್ ಮತ್ತು ನೌಕರರ ಭವಿಷ್ಯ ನಿಧಿ ಪಾವತಿಗೆ ರೂ.2000 ಕೋಟಿ ಸಾಲ, ಅದರ ಅಸಲು ಮತ್ತು ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ. ನಿವೃತ್ತ ನೌಕರರ ವೇತನ ಹೆಚ್ಚಳ ವ್ಯತ್ಯಾಸ ಮೊತ್ತ ಪಾವತಿಗೆ ರೂ.224 ಕೋಟಿ ಬಿಡುಗಡೆ ಮಾಡಿದ್ದಲ್ಲದೇ, ಶಕ್ತಿ ಯೋಜನೆಯಡಿಯಲ್ಲಿ 4 ನಿಗಮಗಳಿಗೆ ಇಲ್ಲಿಯವರೆಗೆ ರೂ. 12632.10 ಕೋಟಿ ಪಾವತಿ ಮಾಡಲಾಗಿದೆ ಎಂದು ಕಾಂಗ್ರೆಸ್ ಲೆಕ್ಕ ನೀಡಿದೆ.
ಇನ್ನೂ ಬಿಜೆಪಿ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಇಲ್ಲ, ಶೂನ್ಯ ನೇಮಕಾತಿ, ಡೀಸೆಲ್ ಹಣ ಬಾಕಿ ಉಳಿಸಿದ್ದು, ನೌಕರರ ಭವಿಷ್ಯ ನಿಧಿ ಹಣ ಬಾಕಿ, ಬಿಡಿ ಭಾಗಗಳ ಹಣ ಬಾಕಿ ಉಳಿಸಿತ್ತು. ನೌಕರರಿಗೆ ಅರ್ಧ ವೇತನ, ಈ ತಿಂಗಳ ವೇತನ ಮುಂದಿನ ತಿಂಗಳು ಪಾವತಿ, ನಿವೃತ್ತ ನೌಕರರ ಉಪಧನ , ಭವಿಷ್ಯ ನಿಧಿ, ಗಳಿಕೆ ರಜೆ ವರ್ಷಾನುಗಟ್ಟಲೆ ಬಾಕಿ, ವೇತನ ಹೆಚ್ಚಳ ಬಾಕಿ ಉಳಿಸಿಕೊಂಡಿದೆ.
ಹತ್ತಾರು ವರ್ಷಗಳಿಂದ ಮೃತ ಸಿಬ್ಬಂದಿಗಳ ಅವಲಂಬಿತರು ನೌಕರಿಗಾಗಿ ಕಾಯುತ್ತಿದ್ದರು. ಸಾರಿಗೆ ಸಂಸ್ಥೆಗಳ ಇತಿಹಾದಲ್ಲಿಯೇ ಸುದೀರ್ಘ 15 ದಿವಸಗಳ ಮುಷ್ಕರ ನಡೆಸಿದ ಕೀರ್ತಿ ಬಿಜೆಪಿಯದ್ದು. ಮುಷ್ಕರದ ಹೆಸರಿನಲ್ಲಿ 3000 ಕ್ಕೂ ಹೆಚ್ಚು ಅಮಾಯಕ ನೌಕರರ ವಜಾ/ ಅಮಾನತು ಶಿಕ್ಷೆ. ಇಂದಿಗೂ ನೌಕರರು ಕೋರ್ಟ್‌ಗೆ ಅಲೆಯುತ್ತಿದ್ದಾರೆ ಎಂದು ಬಿಜೆಪಿ ವೈಫಲ್ಯಗಳ ಪಟ್ಟಿ ನೀಡಿ ತಿರುಗೇಟು ನೀಡಿದೆ.
ಸರಿಯಾಗಿ ಸಂಪೂರ್ಣ ವಿಷಯ ತಿಳಿದು ಸರ್ಕಾರದ ವಿರುದ್ಧ ಟೀಕೆ ಮಾಡಿ. ಇಲ್ಲದಿದ್ದರೆ ಈ ರೀತಿ ನಮ್ಮ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಅವರ ಕಾಲೆಳೆದಿದೆ.
ಉಚಿತ ಯೋಜನೆ ಆಮಿಷದಿಂದ ಈ ದುಸ್ಥಿತಿ:ಛಲವಾದಿ
ರಾಜ್ಯದ ಜನತೆಗೆ 'ಉಚಿತ'ದ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಆಹುತಿ ಪಡೆಯಲು ಹೊರಟಿದೆ. "ಶಕ್ತಿ" ಯೋಜನೆಯ ಅಬ್ಬರದ ಪ್ರಚಾರದ ನಡುವೆ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಳ್ಳ ಹಿಡಿಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಸ್ವಯಂಕೃತ ಅಪರಾಧಕ್ಕೆ ಹಿಡಿದ ಕೈಗನ್ನಡಿ ಎಂದು ಛಲವಾದಿ ನಾರಾಯಣ ಸ್ವಾಮಿ ದೂರಿದ್ದರು.
ಕಳೆದ ಮೂರು ಆರ್ಥಿಕ ವರ್ಷಗಳಿಂದ ಸರ್ಕಾರ ನಿಗಮಗಳಿಗೆ ಪಾವತಿಸಬೇಕಾದ ಶಕ್ತಿ ಯೋಜನೆಯ ಬಾಕಿ ಮೊತ್ತ ಬೆಟ್ಟದಂತೆ ಬೆಳೆದಿದೆ. ನಾಲ್ಕು ನಿಗಮಗಳಿಗೆ 2023-24ರಲ್ಲಿ ರೂ. 1,180.62 ಕೋಟಿ, 2024-25ರಲ್ಲಿ ರೂ. 1,170.46 ಕೋಟಿ, 2025-26ರಲ್ಲಿ ರೂ. 1,869.56 ಕೋಟಿ ಸೇರಿ ಒಟ್ಟು ಬಾಕಿ 4,220.63 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದರು.












Click it and Unblock the Notifications