Mandya: ಅವಾಸ್ತವಿಕ 'ಶಕ್ತಿ' ಯೋಜನೆ: ವರ್ಗಾವಣೆ ಶಿಕ್ಷೆಗೆ KSRTC ಚಾಲಕ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಜಲೈ 06: ಕರ್ನಾಟಕ ರಾಜ್ಯ ಸರ್ಕಾರದ ಅವಾಸ್ತವಿಕ 'ಶಕ್ತಿ' ಯೋಜನೆಯಿಂದ ಸಾರಿಗೆ ಸಂಸ್ಥೆಯ ಶಕ್ತಿಯನ್ನು ಕುಂದಿಸಲಾಗುತ್ತಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. ಸರ್ಕಾರದ ವರ್ಗಾವಣೆ ಆದೇಶದಿಂದ ಚಾಲಕನನ್ನು ಆತ್ಮಹತ್ಯೆಗೆ ಪ್ರೇರಿಸುತ್ತದೆ ಎಂದು ಕಾಂಗ್ರೆಸ್ ಮತ್ತು ಸಚಿವ ಎನ್. ಚಲುವನಾರಾಯಣ ಸ್ವಾಮಿ ವಿರುದ್ಧ ವಿಪಕ್ಷ ಆಕ್ರೋಶ ಹೊರಹಾಕಿದೆ.
ವರ್ಗಾವಣೆ ವಿಚಾರವಾಗಿ ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎಚ್.ಎನ್. ಜಗದೀಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಜೊತೆಗಿದ್ದ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಆತನ ಜೀವಕ್ಕೆ ಹಾನಿಯಾಗಿಲ್ಲ.

ಈ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ ಶಕ್ತಿ ಯೋಜನೆ ಮತ್ತು ಸಚಿವರು ಸೇರಿದಂತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
'ಶಕ್ತಿ' ಯೋಜನೆಯ ಮೂಲಕ ರಾಜ್ಯ ಸಾರಿಗೆ ಸಂಸ್ಥೆಯ "ಶಕ್ತಿ"ಯನ್ನೇ ಕುಂದಿಸುತ್ತಿರುವ ರಾಜ್ಯದ #ATMSarakara ದ ಸಚಿವ ಎನ್ ಚಲುವನಾರಾಯಣ ಸ್ವಾಮಿ ಅವರು ಇದೀಗ ದ್ವೇಷದ ರಾಜಕಾರಣಕ್ಕೆ ಇಳಿದಿದ್ದಾರೆ. ಸಚಿವರು ತನ್ನ ಸ್ವಕ್ಷೇತ್ರದ ಬಸ್ ನಿರ್ವಾಹಕನಿಗೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಮೊದಲೇ ಸರ್ಕಾರದ ಅವಾಸ್ತವಿಕ ಗ್ಯಾರಂಟಿಯಾದ ಶಕ್ತಿ ಯೋಜನೆಯ ಮೂಲಕ ಬಸವಳಿದಿರುವ ಸಾರಿಗೆ ಸಂಸ್ಥೆಯ ಎಲ್ಲ ಘಟಕಗಳ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ, ಈಗ ಅನಪೇಕ್ಷಿತ ವರ್ಗಾವಣೆಯಂತಹ ಶಿಕ್ಷೆ ನೀಡಿದೆ. ಈ ಮೂಲಕ ಚಾಲಕ ಹಾಗೂ ನಿರ್ವಾಹಕರ "ಶಕ್ತಿ"ಯನ್ನು ಕುಂದಿಸುತ್ತಿದೆ ಎಂದು ಬಿಜೆಪಿ ಕುಟುಕಿದೆ.

ಬಸ್ ಚಾಲಕ ಆತ್ಮಹತ್ಯೆಗೆ ಕಾರಣವೇನು?
ರಾಜ್ಯ ಕೃಷಿ ಸಚಿವರಾದ ಎನ್. ಚಲುವನಾರಾಯಣ ಸ್ವಾಮಿ ಅವರ ನಿರ್ದೇಶಕದ ಮೇರೆಗೆ ನಿಗಮದ ಅಧಿಕಾರಿಗಳು ಚಾಲಕ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಒಪ್ಪದ ಚಾಲಕ ಆದೇಶ ಸ್ವೀಕರಿಸದೇ ಕಿಮಿನಾಶಕ ತಂದು ನಾಗಮಂಗಲ ಡಿಪೋದಲ್ಲಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.
ಅಧಿಕಾರಿಗಳ ವರ್ಗಾವಣೆ ನಡೆಯಿಂದ ಬೇಸತ್ತು ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಚಾಲಕ ಜೆಡಿಎಸ್ ಪಕ್ಷದ ಪರವಾಗಿದ್ದದ್ದಕ್ಕೆ ಅವರನ್ನು ಸಚವರೇ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕಾರಣಕ್ಕೆ ಸ್ವಕ್ಷೇತ್ರದಲ್ಲಿ ಸಚಿವರಾದ ಎನ್ ಚಲುವನಾರಾಯಣ ಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮೊದಲೇ ಚಾಲಕ ಸಿಬ್ಬಂದಿ ಶಕ್ತಿ ಯೋಜನೆಯಿಂದ ಬಸವಳಿದಿದ್ದಾರೆ ಎಂದು ಕರ್ನಾಟಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications