ಶಕ್ತಿ ಯೋಜನೆಯಿಂದ ಬಸ್ ನಿರ್ವಾಹಕರಿಗೆ ತೊಂದರೆ: ಸಭೆ ಆಯೋಜನೆಗೆ ಕೋರಿ ಇಲಾಖೆಗೆ ಪತ್ರ
ಬೆಂಗಳೂರು, ಸೆಪ್ಟಂಬರ್ 21: ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೇವೆ ನೀಡುವ 'ಶಕ್ತಿ ಯೋಜನೆ' ಜಾರಿಯಾಗಿ ನೂರು ದಿನಗಳು ಕಳೆದಿವೆ. ಈ ಮಧ್ಯೆ KSRTC ಬಸ್ ನಿರ್ವಾಹಕರು ಮಹಿಳೆಯರಿಂದ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಶೀಘ್ರವೇ ತುರ್ತು ಸಭೆ ನಡೆಸುವಂತೆ ಕೋರಿ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ.
ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ 'ಶಕ್ತಿ ಯೋಜನೆ'ಗೆ ಜೂನ್ 11ರಂದು ಚಾಲನೆ ನೀಡಲಾಗಿದೆ. ಅಂದಿನಿಂದ ಈವರೆಗೆ ಸುಮಾರು 6 ಕೋಟಿಗೆ ಹೆಚ್ಚು ಮಂದಿ ಮಹಿಳೆಯರುವ ಪ್ರಯಾಣ ಮಾಡಿದ್ದಾರೆ. ಆದರೆ ಹೀಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಸ್ ನಿರ್ವಾಹಕರು (ಕಂಡಕ್ಟರ್) ಯೋಜನೆಯಿಂದ ಸಾಕಷ್ಟು ತೊಂದರೆ ಅನುಭವಿಸಿರುವುದು ಗೊತ್ತಾಗಿದೆ.

ಸಮಸ್ಯೆಗಳ ನಿವಾರಣೆ ಸಂಬಂಧ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕಸ್ ಫೆಡರೇಷನ್ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ksrtc) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಳಿಕ ಎದುರಾದ ಸಮಸ್ಯೆಗಳನ್ನು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಟಿಕೆಟ್ ಪರಿಶೀಲಿಸಿ ಕಂಡಕ್ಟರ್ ವಿರುದ್ಧ ಕ್ರಮ
ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಓಡಾಡುವ ಮಹಿಳೆಯರಿಂದ ಸಾಕಷ್ಟು ನಿರ್ವಾಹಕರು ಕಿರುಕುಳ ಅನುಭವಿಸಿದ್ದಾರೆ. ಕಳೆದ ಸೆಪ್ಟಂಬರ್ 14ರಂದು ಸಿಗಂಧೂರಿನಿಂದ ಕೋಲಾರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ನಾಲ್ಕು ಮಹಿಳೆಯರು ಹತ್ತಿದ್ದರು. ಅವರು ಮೊದಲೇ ಟಿಕೆಟ್ ಕಾಯ್ದಿರಿಸಿದಂತೆ ನಿರ್ವಾಹಕ ರಾಮಣ್ಣ ಅವರು ರಿಸರ್ವೇಶನ್ ಟಿಕೆಟ್ ಪರಿಶೀಲಿಸಿ ಚಾರ್ಟ್ ನಲ್ಲಿ ಗುರುತು ಮಾಡಿಕೊಂಡಿದ್ದರು.

ಬಸ್ ರಿಪ್ಪನ್ ಪೇಟೆ ತೆರಳಿದಾಗ ಟಿಕೆಟ್ ತಪಾಸಣೆಗೆ ಬಂದ ಅಧಿಕಾರಿಗಳ ತಂಡಕ್ಕೆ ಮಹಿಳೆಯರು ಶೂನ್ಯ ಬೆಲೆಯ ಟಿಕೆಟ್ ನೀಡಲಿಲ್ಲ. ಈ ಸಂಬಂಧ ಅಧಿಕಾರಿಗಳು ಬಸ್ ನಿರ್ವಾಹಕರಿಗೆ ಮೆಮೋ ನೀಡಿದ್ದಾರೆ. ಇಂತಹ ಘಟನೆಗಳು ಶಕ್ತಿ ಯೋಜನೆ ಜಾರಿ ಬಳಿಕ ನಡೆಯುತ್ತಲೇ ಇವೆ.
ನಿತ್ಯ ಇದೇ ಮಾರ್ಗದಲ್ಲಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಮಹಿಳೆಯರಿಗೆ ನಿರ್ವಾಹಕ ಟಿಕೆಟ್ ನೀಡಿರಲಿಲ್ಲ. ಇದರಿಂದ ಹಿಂದೆ ಯಾವುದೇ ಲಾಭದ ಉದ್ದೇಶ ಇರಲಿಲ್ಲ. ಅಲ್ಲದೆ ನಿರ್ವಾಹಕರು ಈ ಯೋಜನೆಗೆ ಪೂರ್ಣವಾಗಿ ಹೊಂದಿಕೊಳ್ಳುವವರೆಗೆ ಮೇಲಾಧಿಕಾರಿಗಳು ಇಂತಹ ಕ್ರಮಗಳನ್ನು ಕೈಗೊಳ್ಳದಂತೆ ಸೂಚಿಸಬೇಕು. ಅಲ್ಲದೇ ಮಹಿಳೆಯರಿಂದ ಆಗುವ ತೊಂದರೆ, ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ತುರ್ತು ಸಭೆ ಕರೆಯುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.












Click it and Unblock the Notifications