ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಜು.1ರ ತನಕ ಸಿಐಡಿ ವಶಕ್ಕೆ
ಬೆಂಗಳೂರು, ಜೂನ್ 24: ಜೆಡಿಎಸ್ ನಾಯಕ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣರನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಭಾನುವಾರ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ವಿರುದ್ಧ ಹಾಸನದ ಹೊಳೆನರಸೀಪುರದ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಸಂಜೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ಐಪಿಸಿ ಸೆಕ್ಷನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ಭಾನುವಾರ ಮುಂಜಾನೆ 4 ಗಂಟೆಯ ತನಕ ಅವರನ್ನು ವಿಚಾರಣೆ ನಡೆಸಿ, ಬಳಿಕ ಬಂಧಿಸಿದ್ದರು. ಡಾ. ಸೂರಜ್ ರೇವಣ್ಣ ಎಂಎಲ್‌ಸಿಯಾದ ಕಾರಣ ಅವರನ್ನು ಬೆಂಗಳೂರಿಗೆ ಕರೆತಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಸಿಐಡಿ ವಶಕ್ಕೆ ಡಾ. ಸೂರಜ್ ರೇವಣ್ಣ: ಭಾನುವಾರ ಸಂಜೆ ನ್ಯಾಯಾಧೀಶರು ಡಾ. ಸೂರಜ್ ರೇವಣ್ಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕರ್ನಾಟಕ ಸರ್ಕಾರ ಡಾ. ಸೂರಜ್ ರೇವಣ್ಣ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಆದ್ದರಿಂದ ಸೋಮವಾರ ಸಿಐಡಿ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿ ಡಾ. ಸೂರಜ್ ರೇವಣ್ಣ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪೊಲೀಸರ ಮನವಿ ಪರಿಗಣಿಸಿ, ಜುಲೈ 1ರ ತನಕ ಡಾ. ಸೂರಜ್ ರೇವಣ್ಣರನ್ನು ಸಿಐಡಿ ವಶಕ್ಕೆ ನೀಡಿ, ಆದೇಶಿಸಿದೆ.
ಆಪ್ತ ಶಿವಕುಮಾರ್ ನಾಪತ್ತೆ: ಡಾ. ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಯುವಕ ಹಣಕ್ಕಾಗಿ ಸೂರಜ್‌ಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಠಾಣೆಗೆ ವಿವರಣೆ ನೀಡಲು ಡಾ. ಸೂರಜ್ ರೇವಣ್ಣ ಬಂದಿದ್ದರು. ಆಗ ಪೊಲೀಸರು ಅವರನ್ನು ಬಂಧಿಸಿದ್ದರು.
ಸೂರಜ್‌ಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ಆರೋಪದ ಕುರಿತು ಸೂರಜ್ ಆಪ್ತ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಅರಕಲಗೂಡು ಮೂಲದ ಯುವಕನನ್ನು ಡಾ. ಸೂರಜ್‌ಗೆ ಪರಿಚಯ ಮಾಡಿಸಿದ್ದು ಇದೇ ಶಿವಕುಮಾರ್ ಎಂಬ ಮಾಹಿತಿ ಇದೆ.
ಶಿವಕುಮಾರ್ ಸೂರಜ್ ಬಳಿ ಒಳ್ಳೆಯ ಹುಡುಗ ಈತ. ಊರುಕಡೆ ಒಳ್ಳೆಯ ಸಂಘಟನೆ ಮಾಡಿಕೊಂಡಿದ್ದಾನೆ. ನಮ್ಮ ಪಕ್ಷಕ್ಕೆ ದುಡಿಯುತ್ತಾನೆ ಎಂದು ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ಮೂಲದ ಯುವಕನನ್ನು 4 ತಿಂಗಳ ಹಿಂದೆ ಕರೆತಂದು ಪರಿಚಯ ಮಾಡಿಸಿದ್ದರು.
ಸೂರಜ್ ಆಪ್ತರಾಗಿರುವ ಶಿವಕುಮಾರ್ ಮೂಲಕವೇ ಡಾ. ಸೂರಜ್ ರೇವಣ್ಣರನ್ನು ಟ್ರಾಪ್ ಮಾಡಲಾಗಿದೆ ಎಂಬುದು ಸದ್ಯದ ಆರೋಪ. ಲೋಕಸಭೆ ಚುನಾವಣೆ ಫಲಿತಾಂಶ 2024 ಪ್ರಕಟವಾದ ದಿನ ಬಿಜೆಪಿ ನಾಯಕರು, ಕಾರ್ಯಕರ್ತರ ಜೊತೆ ಈ ಯುವಕ ಕಾಣಿಸಿಕೊಂಡಿದ್ದ.
ಹಾಸನ ಚುನಾವಣೆಯಲ್ಲಿ ಪ್ರಜ್ವಲ್ ಸೋತಾಗ ಶ್ರೇಯಸ್ ಪರವಾಗಿ ನಡೆದ ವಿಜಯೋತ್ಸವದಲ್ಲಿ ಬಿಜೆಪಿ ನಾಯಕರ ಜೊತೆಗೆ ಶಿವಕುಮಾರ್ ಪಾಲ್ಗೊಂಡಿದ್ದರು. ಡಾ. ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಬಳಿಕ ಶಿವಕುಮಾರ್ ನಾಪತ್ತೆಯಾಗಿದ್ದಾರೆ.












Click it and Unblock the Notifications