ಲೋಕಸಭಾ ಚುನಾವಣೆ: ಮೈತ್ರಿಕೂಟದ ಸೋಲಿನ ಕಾರಣಗಳ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 16 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. 2019ರ ಲೋಕಸಭಾ ಚುನಾವಣೆಯನ್ನೂ ಮೈತ್ರಿ ಮಾಡಿಕೊಂಡು ಎದುರಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದ್ದು ಮಾತ್ರ 2 ಸೀಟು.
ಹೌದು, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್, ಹಾಸನದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದವು.
ಮಲ್ಲಿಕಾರ್ಜುನ ಖರ್ಗೆ, ಎಂ. ವೀರಪ್ಪ ಮೊಯ್ಲಿ, ಕೆ. ಎಚ್. ಮುನಿಯಪ್ಪ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಸೋಲು ಕಂಡಿದ್ದರು. ಎಚ್. ಡಿ. ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಆನಂದ್ ಅಸ್ನೋಟಿಕರ್, ಪ್ರಮೋದ್ ಮಧ್ವರಾಜ್ ಜೆಡಿಎಸ್‌ನಲ್ಲಿ ಸೋಲುಂಡ ಪ್ರಮುಖರು.
ಕರ್ನಾಟಕ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿ ಕ್ಷೇತ್ರವಾರು ಸೋಲಿನ ಪರಾಮರ್ಶೆ ನಡೆಸಿದೆ. ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆಯ ಗೊಂದಲ ಚುನಾವಣೆಯಲ್ಲಿ ಎರಡೂ ಪಕ್ಷಗಳ ಹಿನ್ನಡೆಗೆ ಕಾರಣ ಎಂದು ಹೇಳಿದೆ. ಕ್ಷೇತ್ರವಾರು ಸೋಲಿನ ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರು ಉತ್ತರ ಕ್ಷೇತ್ರ
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡರು ಬಿಜೆಪಿಯ ಡಿ. ವಿ. ಸದಾನಂದ ಗೌಡರ ವಿರುದ್ಧ ಸೋಲು ಕಂಡರು. ಅಚ್ಚರಿಯ ಸಂಗತಿ ಎಂದರೆ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದರು. ಆದರೆ, ಬಿಜೆಪಿ ಸೇರಲು ತೀರ್ಮಾನಿಸಿದ್ದ ಶಾಸಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕೈ ಕೊಟ್ಟರು. ಆದ್ದರಿಂದ, ಕ್ಷೇತ್ರ ಕೈ ತಪ್ಪಿತು.

ಹಾಸನ ಮತ್ತು ತುಮಕೂರು ಕ್ಷೇತ್ರ
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಲೋಕಸಭಾ ಚುನಾವಣೆಯಲ್ಲಿ ಸೋಲುಕಂಡರು. ಹಾಸನ ಬಿಟ್ಟು ತುಮಕೂರು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅವರು ಬಿಜೆಪಿಯ ಜಿ. ಎಸ್. ಬಸವರಾಜು ವಿರುದ್ಧ ಸೋತರು. ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಪರವಾಗಿ ಕೆಲಸ ಮಾಡಿದರು. ಕೆಲವರು ತಟಸ್ಥರಾಗಿ ಉಳಿದರು. ಇದರಿಂದಾಗಿ ಮೈತ್ರಿಕೂಟಕ್ಕೆ ಹಿನ್ನಡೆ ಆಯಿತು. ಹಾಸನದಲ್ಲಿಯೂ ಇದೇ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಮತಗಳಿಕೆ ಪ್ರಮಾಣ ಕಡಿಮೆ ಆಯತು. ಆದರೆ, ಅವರು ಗೆಲುವು ಕಂಡರು.

ಜೆಡಿಎಸ್ ನೆಲೆಯೇ ಇಲ್ಲದ ಕ್ಷೇತ್ರಗಳು
ಲೋಕಸಭಾ ಚುನಾವಣೆ ಮೈತ್ರಿಯಂತೆ ವಿಜಯಪುರ, ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಆದರೆ, ಅಲ್ಲಿ ಪಕ್ಷಕ್ಕೆ ನೆಲೆಯೇ ಇರಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡರು. ಈ ಅತೃಪ್ತ ಅಕ್ಕಪಕ್ಕದ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿತು. ಮೈತ್ರಿಕೂಟಕ್ಕೆ ಸೋಲಾಯಿತು.

ಮೈಸೂರಿಗಾಗಿ ತುಮಕೂರು ಹೋಯಿತು
ಮೈಸೂರು-ಕೊಡಗು ಕ್ಷೇತ್ರವನ್ನು ಕಾಂಗ್ರೆಸ್‌ಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟುಹಿಡಿದರು. ಸಿ. ಎಚ್. ವಿಜಯಶಂಕರ್‌ರನ್ನು ಕಣಕ್ಕಿಳಿಸಲಾಯಿತು. ಮೈಸೂರು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಪರಿಣಾಮ ಹಾಲಿ ಕಾಂಗ್ರೆಸ್ ಸಂಸದರಿದ್ದ ತುಮಕೂರು ಜೆಡಿಎಸ್ ಪಾಲಾಯಿತು. ಹಾಲಿ ಸಂಸದ ಮುದ್ದಹನುಮೇಗೌಡ ಇದ್ದರೂ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟು ಸೋಲು ಮೈತ್ರಿಕೂಟ ಕಾಣಬೇಕಾಯಿತು.

ಕೋಲಾರದಲ್ಲಿ ಅಚ್ಚರಿಯ ಗೆಲುವು
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆ. ಎಚ್. ಮುನಿಯಪ್ಪ ಕ್ಷೇತ್ರಕ್ಕೆ ಅಪರಿಚಿತರಾದ ಮುನಿಸ್ವಾಮಿ ವಿರುದ್ಧ ಸೋಲು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಮುನಿಯಪ್ಪ ಕೈ ಕೊಟ್ಟರು ಎಂಬ ಕಾರಣಕ್ಕೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡಿದರು. ಮೈತ್ರಿಕೂಟ ನಿರೀಕ್ಷೆ ಇಟ್ಟುಕೊಂಡಿದ್ದ ಸೀಟು ಕೈತಪ್ಪಿ ಹೋಯಿತು.












Click it and Unblock the Notifications