ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಗೌಡರು
ಬೆಂಗಳೂರು, ಅಕ್ಟೋಬರ್ 12 : 1995ರಿಂದ ಇದುವರೆಗೂ ಕರ್ನಾಟಕದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಉತ್ತರ ಕರ್ನಾಟಕ ಭಾಗಕ್ಕೆ ಎಷ್ಟು ಅನುದಾನ ನೀಡಿವೆ? ಎಂಬ ಕುರಿತು ಅಂಕಿ-ಅಂಶಗಳನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ ಪತ್ರಕಾಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಯಾವ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ಪ್ರಶ್ನಿಸಿದ್ದ ದೇವೇಗೌಡರು, ಈ ಕುರಿತು ಅಂಕಿ-ಅಂಶಗಳನ್ನು ಬಹಿರಂಗಪಡಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. [ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟ ನಡಹಳ್ಳಿ]

ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ನೀವು ಸಮಿತಿಯನ್ನು ರಚನೆ ಮಾಡಿದರೆ ಸತ್ಯಾಂಶ ಹೊರಬರಲಿದೆ. ರಾಜಕೀಯ ಟೀಕೆಗಳಿಗೆ ಉತ್ತರ ದೊರೆಯಲಿದೆ ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಪಕ್ಷಗಳ ಸ್ವೇಚ್ಛಾಚಾರದ ಹೇಳಿಕೆಗೆ ಕಡಿವಾಣ ಬೀಳಲಿದೆ ಎಂದು ಗೌಡರು ಹೇಳಿದ್ದಾರೆ. [ಉತ್ತರ ಕರ್ನಾಟದ ಎಲ್ಲಾ ನಗರಗಳಲ್ಲಿ ನಗರ ಸಾರಿಗೆ ಬಸ್]
ಪತ್ರದ ಮುಖ್ಯಾಂಶಗಳು : 1996ರಲ್ಲಿ ನನಗೆ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇನೆ. ಆಗ ಹಣಕಾಸು ಸಚಿವರಾಗಿದ್ದ ನಿಮಗೆ ಈ ಬಗ್ಗೆ ಮಾಹಿತಿ ತಿಳಿದಿದೆ.
ಜೆ.ಎಚ್.ಪಟೇಲ್ ಮತ್ತು ಧರ್ಮಸಿಂಗ್ ಅವರ ಅವಧಿಯಲ್ಲಿಯೂ ತಾವು ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದು ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ನಿಮಗೆ ಯಾವ ಕಾಲದಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ತಿಳಿದಿದೆ.
ಬಿಜೆಪಿಯವರು ರಾಜಕೀಯ ದ್ವೇಷದಿಂದ ಎಚ್.ಡಿ.ದೇವೇಗೌಡರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂದು ದೂರುತ್ತಿದ್ದಾರೆ. ಇದೇ ಪ್ರಶ್ನೆಯನ್ನು ಪದೇ-ಪದೇ ಕೇಳುವ ಮೂಲಕ ಜನರಲ್ಲಿ ಈ ಕುರಿತು ಸಂದೇಹ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ.
ಆದ್ದರಿಂದ, ಇಲ್ಲಿಯವರೆಗೆ ಆಡಳಿತ ನಡೆಸಿದ ಸರ್ಕಾರಗಳು ಉತ್ತರ ಕರ್ನಾಟದ ಅಭಿವೃದ್ಧಿಗೆ ನೀಡಿದ ಅನುದಾನದ ಬಗ್ಗೆ ಜನರಿಗೆ ಸತ್ಯಾಂಶ ತಿಳಿಸಬೇಕಾಗಿದೆ. ಅದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಬೇಕು ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.












Click it and Unblock the Notifications