
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ಹೀಗೆ
ಬೆಂಗಳೂರು, ಡಿ. 01: ರಾಜ್ಯದಲ್ಲಿ ಮುಸ್ಲಿಂ ಬಾಲಕಿಯರಿಗಾಗಿ ಪ್ರತ್ಯೇಕ ಕಾಲೇಜುಗಳನ್ನು ತೆರೆಯುವ ಕುರಿತು ರಾಜ್ಯದ ವಕ್ಫ್ ಮಂಡಳಿಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅನುಮತಿ ನೀಡದಿರುವ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕವಾಗಿ ಹತ್ತು ಕಾಲೇಜುಗಳನ್ನು ಆರಂಭಿಸುವುದಾಗಿ ವಕ್ಫ್ ಬೋರ್ಡ್ ಮುಖ್ಯಸ್ಥರು ಹೇಳಿಕೆ ನೀಡಿದ್ದರು. ಇದು ರಾಜ್ಯದಲ್ಲಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ಮುಸ್ಲಿಂ ಪ್ರತ್ಯೇಕ ಕಾಲೇಜು ಪ್ರಾರಂಭದ ಪ್ರಸ್ತಾಪ ಸರಕಾರದ ಮಟ್ಟದಲ್ಲಿ ಇಲ್ಲ: ಶಶಿಕಲಾ ಜೊಲ್ಲೆ
ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ಕಾಲೇಜುಗಳನ್ನು ತೆರೆಯುವ ಕುರಿತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯಸ್ಥರ ಹೇಳಿಕೆ ಕೇವಲ ಹೇಳಿಕೆಯಾಗಿದೆ. ಅವರಿಂದ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.

ಕಾಲೇಜು ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದೆ ಬಂದಿಲ್ಲ
"ವಕ್ಫ್ ಬೋರ್ಡ್‌ನಿಂದ ಮುಸ್ಲಿಮ್ ಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರದ ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಇದು ನಮ್ಮ ಸರ್ಕಾರದ ನಿಲುವು ಕೂಡಾ ಆಗಿಲ್ಲ" ಎಂದಿದ್ದಾರೆ.
ವಕ್ಫ್ ಮಂಡಳಿಯ ಅಧ್ಯಕ್ಷರ ಹೇಳಿಕೆ ಕೇವಲ ಹೇಳಿಕೆಯಾಗಿದೆ. ಅಂತಹ ಪ್ರಸ್ತಾವನೆ ಇದ್ದರೇ ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.

ಹಾಜರಾತಿ ಕಡಿಮೆ ವರದಿ ಸುಳ್ಳು ಮತ್ತು ಆಧಾರರಹಿತ!
ಪ್ರತ್ಯೇಕ ಕಾಲೇಜು ಯೋಜನೆ ಪ್ರಸ್ತಾಪ ತಿರಸ್ಕರಿಸಿರುವ ಅವರು, ಹಿಜಾಬ್ ನಿರ್ಬಂಧಗಳ ನಂತರ ಶಾಲಾ- ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆಯಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಇಂತಹ ವರದಿಗಳು "ಸುಳ್ಳು ಮತ್ತು ಆಧಾರರಹಿತ" ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆಯಾಗಿಲ್ಲ ಎಂದಿರುವ ಬಸವರಾಜ ಬೊಮ್ಮಾಯಿ, "ವಾಸ್ತವವಾಗಿ, ರಾಜ್ಯದ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

5-6 ತಿಂಗಳ ಹಿಂದೆಯೇ ಕಾಲೇಜು ಆರಂಭದ ಬಗ್ಗೆ ನಿರ್ಧಾರ
ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಅವರು "ನಾವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲಾ 2.5 ಕೋಟಿ ರೂಪಾಯಿ ವೆಚ್ಚದಲ್ಲಿ 10 ಹೆಣ್ಣುಮಕ್ಕಳ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಸರ್ಕಾರ ಕೂಡ ಈ ಯೋಜನೆಗೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ" ಎಂದು ಹೇಳಿಕೆ ನೀಡಿದ್ದರು.
"ಹಿಜಾಬ್ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಎಲ್ಲರಿಗೂ ಈ ಕಾಲೇಜಿಗೆ ಪ್ರವೇಶ ಪಡೆಯಲು ಅವಕಾಶವಿದೆ" ಎಂದು ಸೇರಿಸಿದ್ದರು.
ಈ ನಿರ್ಧಾರವನ್ನು 5, 6 ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಇದಕ್ಕಾಗಿ ನಿಗದಿಪಡಿಸಿರುವ ಮಂಡಳಿಯಲ್ಲಿ 25 ಕೋಟಿ ರೂಪಾಯಿಯಿದೆ. ನಮಗೆ ರಾಜ್ಯದ ಹಲವೆಡೆ ಭೂಮಿ ಇದೆ. ಅದರಲ್ಲಿ ಹಲವು ಜಿಲ್ಲೆಗಳಲ್ಲಿ ಇದು ವಿಶೇಷವಾಗಿ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು.

ಪ್ರತ್ಯೇಕ ಕಾಲೇಜು ಸ್ಥಾಪನೆಯಿಲ್ಲ ಎಂದ ಶಶಿಕಲಾ ಜೊಲ್ಲೆ
ಮುಸ್ಲೀಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಕಾಲೇಜುಗಳ ಪ್ರಾರಂಭದ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಷ್ಟೇ. ಈ ವಿಷಯದ ಕುರಿತು ನಾನು ವಕ್ಫ್ ಬೋರ್ಡ್ ಅಧ್ಯಕ್ಷರ ಜೊತೆ ಮಾತನಾಡಿದ್ದು, ಇದರ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಯಾವುದೇ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮುಸ್ಲಿಂ ಕಾಲೇಜು ಸ್ಥಾಪನೆಗೆ ಅವಕಾಶ ಕೊಡುವುದಿಲ್ಲಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.