BJP President: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಿರಿಯ ಲಿಂಗಾಯತ ನಾಯಕನ ಪೈಪೋಟಿ; ಮತ್ತೆ ವಿರೋಧಿ ಬಣ ಆಕ್ಟಿವ್
ಬೆಂಗಳೂರು, ಜೂನ್ 24: ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ವಿರುದ್ಧ ಈ ಹಿಂದೆ ವಿರೋಧ ಬಣ ಬಹಿರಂಗವಾಗಿ ಅಸಮಾಧಾನವನ್ನ ಹೊರ ಹಾಕಿತ್ತು. ಇದೀಗ ರಾಜ್ಯಕ್ಕೆ ಕೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತ ಬಿಜೆಪಿ ಹಿರಿಯ ಲಿಂಗಾಯತ ನಾಯಕ ಬಸವನ ಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕ ತಣ್ಣಗಾಗಿದ್ದ ಬಿಜೆಪಿ ಭಿನ್ನರ ಚಟುವಟಿಕೆ ಮತ್ತೆ ಜೋರಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ಇಲ್ಲಿಯವರೆಗೆ ವಿರೋಧಿ ಬಣ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿತ್ತು. ಅಲ್ಲದೇ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿಯನ್ನ ನಡೆಸಿದ್ದರು. ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ವಿಜಯೇಂದ್ರ ಅವರ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿಯೂ ಒತ್ತಾಯಿಸಿದ್ದರು.

ಯತ್ನಾಳ್ ಉಚ್ಚಾಟನೆ ಬಳಿಕ ವಿರೋಧಿ ಬಣ ತಣ್ಣಗಾಗಿತ್ತು. ಆದರೆ, ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಹಲವು ತಿಂಗಳುಗಳ ಬಳಿಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿಕೊಟ್ಟಿದ್ದಾರೆ. ಇತ್ತ ಯಡಿಯೂರಪ್ಪ ಮತ್ತೆ ಸಕ್ರಿಯ ರಾಜಕೀಯದಲ್ಲಿ ಆಕ್ಟಿವ್ ಆದ ಬೆನ್ನಲ್ಲೇ ಬೆಂಗಳೂರಿನ ಬಂಡಾಯ ನಾಯಕರ ಸಭೆ ನಡೆದಿದೆ. ಈ ನಡುವೆ ಬಿಜೆಪಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ಮತ್ತೆ ಮುನ್ನಲ್ಲೆಗೆ ಬಂದಿದೆ.
ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಅವರ ಪರವಾಗಿರುವುದಕ್ಕಿಂತ ವಿರೋಧಿಗಳ ಸಂಖ್ಯೆಯೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಸಮುದಾಯದ ನಾಯಕರುಗಳು ಹೆಸರುಗಳು ಕೇಳಿ ಬಂದಿತ್ತು. ಒಕ್ಕಲಿಗ ಸಮುದಾಯದಿಂದ ಸಿ ಟಿ ರವಿ, ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ್ ಹಾಗೂ ಆರ್ ಅಶೋಕ್ ಅವರ ಹೆಸರು ಕೇಳಿ ಬಂದಿತ್ತು. ಅಲ್ಲದೇ ಲಿಂಗಾಯತ ಸಮುದಾಯದಿಂದ ವಿ ಸೋಮಣ್ಣ ಅವರ ಹೆಸರು ಕೇಳಿ ಬಂದಿದ್ರೆ, ಇತ್ತ ವಿರೋಧ ಬಣದಿಂದ ಕುಮಾರ ಬಂಗಾರಪ್ಪ ಅವರ ಹೆಸರು ಕೇಳಿ ಬಂದಿತ್ತು.
ಇನ್ನೂ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆ ನಡುವೆ ಕೇಂದ್ರ ಸಚಿವ ವಿ. ಸೋಮಣ್ಣ ಕೆಲವೇ ದಿನಗಳ ಹಿಂದೆ ವಿಜಯೇಂದ್ರ ವಿರೋಧಿ ಬಣದ ನಾಯಕರೊಂದಿಗೆ ಸಭೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಬಂಡಾಯ ಬಿಜೆಪಿ ನಾಯಕರ ಸಭೆಯೊಂದಿಗೆ ಮತ್ತೆ ಭಿನ್ನಮತ ಚುರುಕುಪಡೆದಿದೆ. ಸೋಮಣ್ಣ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದು, ವಿಜಯೇಂದ್ರ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಬಂಗಾರಪ್ಪ, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಒತ್ತಾಯವನ್ನು ಪುನರುಚ್ಚರಿಸಿದ್ದಾರೆ.
ವಿಜಯೇಂದ್ರ ವಿರುದ್ದ ವಾಗ್ದಾಳಿ ಮುಂದುವರಿಸಿರುವ ಕುಮಾರ್ ಬಂಗಾರಪ್ಪ, ಪಕ್ಷದ ಕಾರ್ಯಕರ್ತರು ವ್ಯವಸ್ಥಿತ ಬದಲಾವಣೆಯನ್ನು ಬಯಸುತ್ತಾರೆ. ವಿಜಯೇಂದ್ರ ಜನರ ಭಾವನೆಗೆ ತಕ್ಕಂತೆ ಪಕ್ಷವನ್ನು ಹೋರಾಟಕ್ಕೆ ಕರೆದೊಯ್ಯಲು ವಿಫಲರಾಗಿದ್ದಾರೆ. ವಿಜಯೇಂದ್ರ ಜನರ ಭಾವನೆಯಂತೆ ನೇರವಾಗಿ ಹೋರಾಟ ಮಾಡುತ್ತಿಲ್ಲ. ಪಕ್ಷ ಜನರ ಭಾವನೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನೂ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವರಾಗಿದ್ದಾರೆ. ಅವರು ರಾಜ್ಯ ರಾಜಕೀಯಕ್ಕೆ ಬರಬೇಕೇ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನಾವು ಅವರನ್ನು ಅಧ್ಯಕ್ಷರನ್ನಾಗಿ ಎಂದು ಒತ್ತಾಯಿಸಿಲ್ಲ, ಅವರೂ ನಮ್ಮ ಬೆಂಬಲ ಕೇಳಿಲ್ಲ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.












Click it and Unblock the Notifications