ಕರ್ನಾಟಕ; ಕೋವಿಡ್ ಲಸಿಕೆ ಪಡೆದ ಜಿಲ್ಲಾಧಿಕಾರಿಗಳು, ಎಸ್ಪಿ
ಬೆಂಗಳೂರು, ಫೆಬ್ರವರಿ 08; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರಿಂದ ರಾಜ್ಯದಲ್ಲಿ 2ನೇ ಹಂತದ ಕೋವಿಡ್ ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಭಾನುವಾರದ ತನಕ ರಾಜ್ಯದಲ್ಲಿ 3,87,944 ಕೋವಿಡ್ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗಿದೆ.
ಫೆಬ್ರವರಿ 8ರ ಸೋಮವಾರದಿಂದ 10ರ ತನಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆ ನೀಡುವ 2ನೇ ಹಂತದ ಅಭಿಯಾನ ನಡೆಯಲಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಲಸಿಕೆಯನ್ನು ಪಡೆಯಲಿದ್ದಾರೆ. ಜಿಲ್ಲಾಧಿಕಾರಿಗಳು ಅಭಿಯಾನದ ಮೇಲ್ವಿಚಾರಣೆ ನಡೆಸಲಿದ್ದಾರೆ.
ಗೃಹ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಎರಡನೇ ಹಂತದ ಅಭಿಯಾನದಲ್ಲಿ ಲಸಿಕೆಯನ್ನು ಪಡೆಯಲಿದ್ದಾರೆ. ಲಸಿಕೆ ಪಡೆಯುವವರ ಮಾಹಿತಿಯನ್ನು ಕೋವಿನ್ ಪೋರ್ಟ್‌ಲ್‌ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.
ಸೋಮವಾರ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋವಿಡ್ ಲಸಿಕೆಯನ್ನು ಪಡೆದರು. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ, ಲಸಿಕೆ ಪಡೆಯಿರಿ ಎಂಬ ಸಂದೇಶವನ್ನು ಸಾರಿದರು.

ರಾಮನಗರ ಜಿಲ್ಲೆ
ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರು ಲಸಿಕೆ ಪಡೆಯುವ ಮೂಲಕ 2ನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. "ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚುತ್ತದೆ" ಎಂದರು.

ದಾವಣಗೆರೆ ಜಿಲ್ಲೆ
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಳ್ಳುವ ಮೂಲಕ ಎರಡನೇ ಹಂತದ ಕೊರೊನಾ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

ಚಾಮರಾಜನಗರ
ಸೋಮವಾರ ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಎಂ. ಆರ್. ರವಿ ಅವರು ಕೋವಿಡ್ ಲಸಿಕೆಯನ್ನು ಪಡೆದರು. ಈ ಮೂಲಕ ಜಿಲ್ಲೆಯಲ್ಲಿ 2ನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಿದರು.

ಕಲಬುರಗಿ ಜಿಲ್ಲಾಧಿಕಾರಿ
ಸೋಮವಾರ ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಅವರು ಮೊದಲಿಗರಾಗಿ ಖುದ್ದು ಕೋವಿಶೀಲ್ಡ್ ಲಸಿಕೆ ಪಡೆಯುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಕಂದಾಯ, ನಗರಾಭಿವೃದ್ಧಿ, ಗೃಹ & ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಲಸಿಕೆ ಪಡೆಯಲಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ಪಡೆದರು.ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು.
ಬಳಿಕ ಮಾತನಾಡಿದ ಅವರು, "ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ, ಸಿಬ್ಬಂದಿಗಳು ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು" ಎಂದರು.












Click it and Unblock the Notifications