ಕರ್ನಾಟಕ ಸಚಿವ ಸಂಪುಟ ಸಭೆ ನಿರ್ಣಯಗಳು
ಬೆಂಗಳೂರು, ಜೂ.14 : ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಆಯಾ ಸಮುದಾಯದ ಶೇ.25ರಷ್ಟು ಮಕ್ಕಳಿಗೆ ಸೀಟು ಕೊಟ್ಟರೆ ಆ ಶಾಲೆಗಳಿಗೆ ಅಲ್ಪಸಂಖ್ಯಾತ ಶಾಲೆಗಳ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಸಂಪುಟ ಸಭೆಯ ವಿವರಗಳನ್ನು ನೀಡಿದರು. ಈ ಹಿಂದೆ ಅಲ್ಪಸಂಖ್ಯಾತ ಶಾಲೆ ಮಾನ್ಯತೆ ಪಡೆಯಲು ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಕನಿಷ್ಠ ಶೇ.75ರಷ್ಟು ಮಕ್ಕಳಿಗೆ ಸೀಟು ನೀಡಬೇಕು ಎಂಬ ನಿಯಮವಿತ್ತು. ಸರ್ಕಾರ ಸದ್ಯ ಈ ನಿಯಮವನ್ನು ಸಡಿಲಿಸಿದೆ ಎಂದರು.
ಶೇ.25ರಷ್ಟು ಸೀಟುಗಳನ್ನು ಆಯಾ ಸಮುದಾಯಕ್ಕೆ ನೀಡದಿದ್ದರೆ, ಆ ಶಾಲೆಗಳು ಇತರೆ ಖಾಸಗಿ ಶಾಲೆಗಳಂತೆ ಶೇ.25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಬಿಟ್ಟುಕೊಡಬೇಕಾಗುತ್ತದೆ. ಆಗ ಅಂತಹ ಶಾಲೆಗಳಿಗೆ ಭಾಷಾ, ಮತೀಯ ಅಲ್ಪಸಂಖ್ಯಾತ ಶಾಲೆಗಳ ಮಾನ್ಯತೆ ಸಿಗುವುದಿಲ್ಲ ಎಂದು ಸಚಿವ ಜಯಚಂದ್ರ ಸ್ಪಷ್ಟಪಡಿಸಿದರು.
ಶೇ.75ರಷ್ಟು ಮಕ್ಕಳಿಗೆ ಸೀಟು ಕೊಡಬೇಕು ಎಂಬ ಹಳೆಯ ನಿಯಮವನ್ನು ಪ್ರಶ್ನಿಸಿ ಕೆಲವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಈಗ ಸರ್ಕಾರ ಈ ಪ್ರಮಾಣವನ್ನು ಶೇ.25ಕ್ಕೆ ಇಳಿಸಿದೆ ಇದು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು. ಸಂಪುಟ ಸಭೆಯ ಇತರ ನಿರ್ಣಯಗಳು

ಗಣಿ ಪರಿಸರ ನಿಗಮ ಸ್ಥಾಪನೆ
ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸುಪ್ರೀಂಕೋರ್ಟ್ ಸೂಚನೆಂತೆ ಕರ್ನಾಟಕ ಗಣಿ ಪರಿಸರ ಪುನರ್ ಸ್ಥಾಪನಾ ನಿಗಮ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಮೂರೂ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಸಂಸ್ಥೆಗಳಿಂದ ದಂಡದ ರೂಪದಲ್ಲಿ 10 ರಿಂದ 11 ಸಾವಿರ ಕೋಟಿ ರೂ. ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಇನ್ನೂ 19 ಸಾವಿರ ಕೋಟಿ ರೂ.ವರೆಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಒಟ್ಟು 30 ಸಾವಿರ ಕೋಟಿ ರೂ. ಮೊತ್ತವನ್ನು ಆಯಾ ಪ್ರದೇಶದ ಪರಿಸರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿಯೇ ಬಳಕೆ ಮಾಡಲು ಕೋರ್ಟ್ ಸೂಚನೆ ನೀಡಿದೆ.

ಬಸವ, ವಾಜಪೇಯಿ ಮನೆಗೆ 720 ಕೋಟಿ
ಸಚಿವ ಸಂಪುಟ ಸಭೆಯಲ್ಲಿ ಬಸವ ವಸತಿ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಯಡಿ 2013-14ನೇ ಸಾಲಿನಲ್ಲಿ ಮಂಜೂರಾಗಿದ್ದ 60 ಸಾವಿರ ಮನೆಗಳನ್ನು ತಲಾ 1.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು 720 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.

ರೇಷ್ಮೆ ಗೂಡಿಗೆ ಪ್ರೋತ್ಸಾಹಧನ ಹೆಚ್ಚಳ
ರೇಷ್ಮೆ ಗೂಡಿಗೆ ನೀಡುವ ಪ್ರೋತ್ಸಾಹಧನ ಪ್ರಮಾಣವನ್ನು ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಿಂದೆ ಪ್ರತಿ ಕೆ.ಜಿ.ಗೆ 10 ರೂ. ನೀಡುತ್ತಿದ್ದ ಗೂಡಿಗೆ 30 ರೂ., 40 ರೂ. ಕೊಡುತ್ತಿದ್ದ ಗೂಡಿಗೆ 50 ರೂ. ನೀಡಲು ಸಂಪುಟ ಒಪ್ಪಿದೆ.

ಹಾಸನ-ಬೆಂಗೂಳೂರು ಅಂದಾಜು ಪಟ್ಟಿ ತಯಾರಿಕೆ
ಸಚಿವ ಸಂಪುಟ ಸಭೆಯಲ್ಲಿ ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಕೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ರಾಜ್ಯದ ಪಾಲಿನ ಹಣ ರು. 467 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಕೆಪಿಎಸ್ಎಸಿ ಸದಸ್ಯರ ಸಂಖ್ಯೆ ಹೆಚ್ಚಳ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಹೋಟಾ ಸಮಿತಿ ನೀಡಿದ್ದ ಶಿಫಾರಸ್ಸಿನ ಅನ್ವಯ ಕೆಪಿಎಸ್ಸಿಯಲ್ಲಿ ಸಂದರ್ಶನ ಸದಸ್ಯರ ಸಂಖ್ಯೆಯನ್ನು 9ರಿಂದ 14ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರಿ ಕಾಲೇಜುಗಳ ಖಾಲಿ ಇರುವ ಹುದ್ದೆ ಭರ್ತಿ
ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ, ಗದಗ, ಕಾರವಾರ, ಕೊಪ್ಪಳ ಚಾಮರಾಜನಗರದ ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ 2014-15ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಕ್ಕೆ ಒಪ್ಪಿಗೆ ನೀಡಲಾಗಿದೆ.

ಸಂಪುಟ ಸಭೆಯ ಇತರ ನಿರ್ಣಯಗಳು
* ಮೈಸೂರು-ಬನ್ನೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ 33.5 ಕೋಟಿ ರೂ. ಹೆಚ್ಚುವರಿ ಅನುದಾನ
* ಮೈಸೂರು ಬನ್ನಿಮಂಟಪ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 9.95 ಕೋಟಿ ರೂ.
* ನೆಮ್ಮದಿ ಕೇಂದ್ರಗಳಲ್ಲಿ ಭ್ರಷ್ಟಾಚಾರ ತಡೆಗೆ 5.18 ಕೋಟಿ ರೂ. ಮೊತ್ತದಲ್ಲಿ ಹೊಸ ತಂತ್ರಜ್ಞಾಣ ಅಳವಡಿಕೆ












Click it and Unblock the Notifications