• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಹಾಟ್‌ಸ್ಪಾಟ್ ಆದ ರಾಜ್ಯದ ಶಾಲಾ- ಕಾಲೇಜುಗಳು; ಮೂರನೇ ಅಲೆ ಆರಂಭವೇ?

|
Google Oneindia Kannada News

ಕರ್ನಾಟಕ, ಡಿಸೆಂಬರ್ 3: ದೇಶದಲ್ಲೇ ಮೊದಲ ಓಮಿಕ್ರಾನ್ ರೂಪಾಂತರ ವೈರಸ್ ಕರ್ನಾಟಕದ ಇಬ್ಬರಿಗೆ ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ವೇಳೆ ರಾಜ್ಯದ ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗುತ್ತಿದ್ದು, ಶಾಲಾ- ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್ ಆಗುವ ಆತಂಕ ಮೂಡಿದೆ.

ಇತ್ತೀಚೆಗೆ ಧಾರವಾಡ, ಮೈಸೂರು ಮತ್ತು ತುಮಕೂರಿನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಕೊಡಗಿನ ಮಡಿಕೇರಿ ನಗರದ ಶಾಲೆಯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಮಡಿಕೇರಿಯ ಒಂದೇ ಶಾಲೆಯ 9 ಮಕ್ಕಳಿಗೆ ಕೊರೊನಾ ಸೋಂಕು
ಈ ನಡುವೆಯೇ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಖಾಸಗಿ ಶಾಲೆಯ 9 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಟೆಸ್ಟ್ ಮಾಡಿ ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಡಗು ಡಿಎಚ್ಒ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಮಡಿಕೇರಿಯ ಒಂದೇ ಶಾಲೆಯ 9 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೊದಲು ಶಾಲಾ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಬಳಿಕ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಒಂಭತ್ತು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ‌ ಮಕ್ಕಳಲ್ಲಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.

ಸೋಂಕಿತರೆಲ್ಲರೂ ಎಂಟನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಮಕ್ಕಳಿಗೆ ಅವರ ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಂಕಿತ ಮಕ್ಕಳ ಪ್ರಾಥಮಿಕ ಸಂಪರ್ಕಿತರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ ಎಂದು ಕೊಡಗು ಡಿಎಚ್ಒ ಡಾ. ವೆಂಕಟೇಶ್ ತಿಳಿಸಿದ್ದಾರೆ.

Schools And Colleges Become Covid Hotspots in Karnataka; Is This Beginning of 3rd Wave

ತುಮಕೂರು ನರ್ಸಿಂಗ್ ಕಾಲೇಜಿನ ಐವರಿಗೆ ಸೋಂಕು
ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಮತ್ತೆ ಐವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕೇರಳ ಮೂಲದ ಐವರು ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಇದೇ ಕಾಲೇಜಿನಲ್ಲಿ ಈ‌ ಮೊದಲು 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈಗ ಪ್ರಾಥಮಿಕ ಸಂಪರ್ಕದ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಿದ್ದಗಂಗಾ ನರ್ಸಿಂಗ್ ಕಾಲೇಜಿನಲ್ಲಿ 8 ಜನರಿಗೆ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಒಟ್ಟು 20 ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ತಗುಲಿದೆ ಎಂದು ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದಾವಣಗೆರೆ ಜಿಲ್ಲೆಗೆ ವಿದೇಶದಿಂದ 11 ಜನರ ಆಗಮನ
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಓಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ಆತಂಕ ಹೆಚ್ಚಾಗುವ ಭೀತಿ ಆವರಿಸಿದೆ.

ದಾವಣಗೆರೆ ಜಿಲ್ಲೆಗೆ ವಿದೇಶದಿಂದ 11 ಜನರು ಆಗಮಿಸಿದ್ದಾರೆ. ಅಮೆರಿಕ, ಐರ್ಲೆಂಡ್‌, ಇಂಗ್ಲೆಂಡ್, ದುಬೈ, ಜರ್ಮನಿ ಸೇರಿದಂತೆ ವಿದೇಶಗಳಿಂದ ಎರಡು ದಿನಗಳ ಹಿಂದೆ 7 ಜನ, ಗುರುವಾರ ನಾಲ್ವರು ಆಗಮಿಸಿದ್ದಾರೆ. ಎಲ್ಲ ಪ್ರಯಾಣಿಕರ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. 11 ಜನರನ್ನು 7 ದಿನ ಕ್ವಾರಂಟೈನ್ ಮಾಡಲಾಗಿದೆ ಎಂದು ಸರ್ವೇಕ್ಷಣ ಅಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದ್ದಾರೆ.

ಮೈಸೂರಿನ ನರ್ಸಿಂಗ್ ವಿದ್ಯಾರ್ಥಿಗಳ ಓಮಿಕ್ರಾನ್ ವರದಿ ನೆಗೆಟಿವ್
ಒಂದು ವಾರದ ಹಿಂದೆ ಮೈಸೂರಿನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಎಲ್ಲರ ಸ್ಯಾಂಪಲ್ಸ್‌ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಸದ್ಯ ಎಲ್ಲ ವಿದ್ಯಾರ್ಥಿಗಳ ಓಮಿಕ್ರಾನ್ ವರದಿ ನೆಗೆಟಿವ್ ಬಂದಿದೆ ಎಂದು ಮೈಸೂರು ಡಿಎಚ್‌ಒ ಡಾ.ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನ ಇಬ್ಬರಲ್ಲಿ ಒಮಿಕ್ರಾನ್ ಪತ್ತೆ ಹಿನ್ನೆಲೆ ಮೈಸೂರಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆ ಜಿಲ್ಲೆಯ ಸರ್ವೇಕ್ಷಣ ಚುರುಕುಗೊಳಿಸಿದೆ. ಬಾವಲಿ ಗಡಿಯಲ್ಲೂ ತಪಾಸಣೆ ಚುರುಕುಗೊಂಡಿದೆ.

ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಕರ್ನಾಟಕದಲ್ಲಿ ಇಬ್ಬರಿಗೆ ಓಮಿಕ್ರಾನ್​ ರೂಪಾಂತರಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ (ಡಿ.3) ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸಭೆ ಕರೆಯಲಾಗಿದೆ.

ಕೊವಿಡ್- 19 ನಿಯಂತ್ರಣ ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಕಂದಾಯ ಸಚಿವರು, ಆರೋಗ್ಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕೆಐಎಬಿ ಕೋವಿಡ್ ನೋಡಲ್ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಹಾಜರಿಗೆ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಹಾಜರಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಿಂದ ಸೂಚನೆ ಕೊಡಲಾಗಿದೆ.

English summary
9 students from same School tests Positive for Covid-19 infection in a private school of Madikeri city in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X