ವಾರಕ್ಕೊಮ್ಮೆ ಶಾಲಾ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆ
ಬೆಂಗಳೂರು, ಜೂನ್ 21; ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಈ ಕುರಿತು ಸುತ್ತೋಲೆಯನ್ನು ಪ್ರಕಟಿಸಲಾಗಿದೆ.
ಶುಭ ಕಲ್ಯಾಣ್ ನಿರ್ದೇಶಕರು ಪಿ. ಎಂ. ಪೋಷಣ್, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. 2023-24ನೇ ಸಾಲಿಗೆ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವಂತೆ ಸೂಚಿಸಲಾಗಿದೆ.

2023-24 ನೇ ಸಾಲಿನಲ್ಲಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1-8 ನೇ ತರಗತಿ ಮಕ್ಕಳಿಗೆ ಅಪೌಷ್ಟಿಕತೆ ಮತ್ತು ಅನಿಮಿಯ ನಿವಾರಣೆಗಾಗಿ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ಮಧ್ಯಾಹ್ನದ ಬಿಸಿಯೂಟದೊಂದಿಗೆ ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆ ವಿತರಣೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ದಿನಾಂಕ 20/06/2023 ರಿಂದ ಪ್ರಾರಂಭಿಸಿ ದಿನಾಂಕ 15/07/2023 ರವರೆಗೆ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಫಲಾನುಭವಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ವಿತರಿಸುವಂತೆ ಈ ಮೂಲಕ ಸೂಚನೆ ನೀಡಲಾಗಿದೆ. ಈ ಸಂಬಂಧ ಪ್ರತಿ ವಿಧ್ಯಾರ್ಥಿಗೆ ಒಂದು ದಿನಕ್ಕೆ ಒಂದು ಮೊಟ್ಟೆ/ ಬಾಳೆಹಣ್ಣು/ ಶೇಂಗಾ ಚಿಕ್ಕಿಯ ಘಟಕ ವೆಚ್ಚ ರೂ. 6ರಂತೆ ನಿಗದಿಪಡಿಸಿರುತ್ತದೆ. ಇದರಂತೆ ವೆಚ್ಚ ಭರಿಸಲು ಸೂಚನೆ ಕೊಡಲಾಗಿದೆ.
ಯಾವ ಅನುದಾನ ಬಳಕೆ?; ರಾಜ್ಯದ ಕಲ್ಯಾಣ ಕರ್ನಾಟಕ ವಿಭಾಗದ 8 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಈ ಜಿಲ್ಲೆಗಳಲ್ಲಿ 2023-24ನೇ ಸಾಲಿನ ಪಿ. ಎ. ಬಿ ಅನುಮೋದನೆ ಮತ್ತು ಅನುದಾನ ಹಂಚಿಕೆಯಂತೆ ಕೇಂದ್ರ ಮತ್ತು ರಾಜ್ಯದ ಪಾಲಿನ ಪ್ಲೆಕ್ಸಿ ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿಯ ಫಲಾನುಭವಿ ಮಕ್ಕಳಿಗೆ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.
ಎಸ್. ಡಿ. ಎಂ. ಸಿ ನೇತೃತ್ವದಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚಿಸಿದ್ದು ಈ ಸಂಬಂಧ ವೆಚ್ಚವನ್ನು K2 PFMS ಅಡಿಯಲ್ಲಿ ಭರಿಸಿ ಖರ್ಚು ವೆಚ್ಚುಗಳನ್ನು ನಿರ್ವಹಿಸುವಂತೆ ತಿಳಿಸಲಾಗಿದೆ.
ಉಳಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ 1-8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಾನುಭವಿ ಮಕ್ಕಳಿಗೆ ಮೇಲ್ಕಂಡಂತೆ ಶಾಲೆಯ ಮುಖ್ಯ ಶಿಕ್ಷಕರು ಹಿಂದಿನ ಸಾಲಿನಲ್ಲಿ ನೀಡಿದ ಮಾರ್ಗಸೂಚಿಯಂತೆ ಎಸ್. ಡಿ. ಎಂ. ಸಿ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಂಡು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಈ ಮೂಲಕ ಸೂಚಿಸಿದೆ. ಈ ಸಂಬಂಧ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2202-00-101-0-18 ಅಡಿಯಲ್ಲಿ ಭರಿಸಿ ಖರ್ಚುವೆಚ್ಚಗಳನ್ನು ನಿರ್ವಹಿಸುವಂತೆ ಹೇಳಿದೆ.
ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಪಿ. ಎಂ. ಪೋಷಣ್ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನೊಂದಿಗೆ MoU ಮಾಡಿಕೊಂಡು ಭಾಗವಹಿಸಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟ ವಿತರಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು (NGO) ಸಹ ಮೇಲ್ಕಂಡ ಉಲ್ಲೇಖಿತ ಮಾರ್ಗಸೂಚಿಯಂತೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕ್ರಮ ವಹಿಸುವಂತೆ ತಿಳಿಸಲಾಗಿದೆ.
ಈ ಕುರಿತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಶಿಕ್ಷಣಾಧಿಕಾರಿಗಳು ಪಿ. ಎಂ. ಪೋಷಣೆ ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಿ. ಎಂ. ಪೋಷಣ್, ಕೂಡಲೇ ಅಗತ್ಯ ಕ್ರಮ ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸುತ್ತೋಲೆ ಹೇಳಿದೆ.












Click it and Unblock the Notifications