BREAKING: ಸರ್ಕಾರದ ಮಹತ್ವದ ತೀರ್ಮಾನ; ಆಗಸ್ಟ್ 23 ರಿಂದ 9, 10, ಪಿಯುಸಿ ತರಗತಿ ಪ್ರಾರಂಭ!
ಬೆಂಗಳೂರು, ಆ. 06: ಕೋವಿಡ್ ಮೂರನೆ ಅಲೆಯ ಆತಂಕದಲ್ಲಿಯೇ ಪ್ರೌಢ ಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್, ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ರಾಜ್ಯದಲ್ಲಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಆಗಸ್ಟ್ 23 ರಿಂದ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ಸವಿಸ್ತಾರವಾಗಿ ಚರ್ಚಿಸಿದರು.

ಸಭೆಯಲ್ಲಿ ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಲು ಹಾಗೂ ರಾಜ್ಯದ ಕೋವಿಡ್ ಸ್ಥಿತಿಗತಿಯನ್ನು ಆಧರಿಸಿ, ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ಪ್ರಾರಂಭಿಸುವ ಬಗ್ಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿ ನಡೆಸಲು ನಿರ್ಧರಿಸಿದ್ದು, ಶಾಲೆ ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ."ಇಂದು ಕೋವಿಡ್ ನಿರ್ವಹಣೆ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ತಜ್ಞರನ್ನು ಕರೆಯಿಸಿ ಸದ್ಯದ ಕೊರೊನಾ ಪರಿಸ್ಥಿತಿಯನ್ನು ಚರ್ಚೆ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈಗಿನ ಪಾಸಿಟಿವಿಟಿ ರೇಟ್ ನೋಡಿಕೊಂಡು ಮುಂದೆ ಅದು ಹೆಚ್ಚಾಗುತ್ತದೆಯೊ? ಕಡಿಮೆ ಆಗುತ್ತದೆಯೊ? ಅದನ್ನು ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆಯ ಬಳಿಕ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಅಥವಾ ನಾಳೆ ಕೋವಿಡ್ ಟಾಸ್ಕ್‌ಪೋರ್ಸ್ ರಚನೆ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ "ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ತಜ್ಞರೊಂದಿಗೆ ಸುಧೀರ್ಘ ಚರ್ಚೆ ಬಳಿಕ ಬೇರೆ ರಾಜ್ಯಗಳಲ್ಲಿ ಸ್ಥಿತಿಗತಿಗಳನ್ನು ಚರ್ಚೆ ಮಾಡಿಕೊಂಡು ಮೊದಲನೆ ಹಂತದಲ್ಲಿ ಪ್ರೌಢ ಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ. ದಿನ ಬಿಟ್ಟು ದಿನ ತರಗತಿಗೆ ನಡೆಸಲು ತೀರ್ಮಾನ ಮಾಡಿದ್ದೇವೆ. ಆ ನಂತರ ಕೊರೊನಾ ಅಲೆ ಹೇಗೆ ಬರುತ್ತದೆ ಹಾಗೂ ಅದರ ತೀವ್ರತೆಯನ್ನು ನೋಡಿಕೊಂಡು ಪ್ರಾಥಮಿಕ ತರಗತಿ ಆರಂಭಿಸಲು ತೀರ್ಮಾನ ಮಾಡಿದ್ದೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನಿಸಲಾಗಿದ್ದು, ರಾತ್ರಿ ಕರ್ಫ್ಯೂ ರಾತ್ರಿ 10ರ ಬದಲು 9ರಿಂದ ಜಾರಿಗೊಳಿಸಲು ನಿರ್ಧರಿಸಿದ್ದು, ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.
ಸಭೆಯಲ್ಲಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಕೆ. ಸುಧಾಕರ್, ತಜ್ಞರಾದ ಡಾ. ಸಿ.ಎನ್. ಮಂಜುನಾಥ್, ಡಾ. ದೇವಿಪ್ರಸಾದ್ ಶೆಟ್ಟಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications