School Holiday: ಶಾಲೆಗಳಿಗೆ ಮಳೆ ರಜೆ ಘೋಷಣೆ, 'ನಿಮ್ದೇನ್ ಅರಾಮ್ ಬಿಡಿ' ಅನ್ನುವವರು ಇಲ್ನೋಡಿ
ಬೆಂಗಳೂರು, ಜೂನ್ 17: ಪ್ರತಿ ವರ್ಷ ಮಳೆಗಾಲ ಸನ್ನಿವೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ (Heavy Rain Alert) ಬರುವ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕೆಲವೊಮ್ಮೆ ಬೆಂಗಳೂರು ಸೇರಿದಂತೆ ಒಳನಾಡು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಪ್ರತಿ ವರ್ಷ ಇಂತಹ ಮಳೆ ರಜೆಗಳು ಕನಿಷ್ಠ 8 ಆದರೂ ಘೋಷಣೆ ಆಗುತ್ತವೆ. ಆಯಾ ಜಿಲ್ಲಾಡಳಿತ ಪರಿಸ್ಥಿತಿ ನೋಡಿಕೊಂಡು ರಜೆ ಘೊಷಿಸುತ್ತಾರೆ. ಇದನ್ನು ಕಂಡು ಕೆಲವರು 'ನಿಮ್ಮದೇನ್ ಅರಾಮ್ ಬಿಡಿ' ಎಂದು ಅಪಹಾಸ್ಯ ಮಾಡುತ್ತಾರೆ. ಅಂತವರು ಈ ಸುದ್ದಿಯನ್ನೊಮ್ಮೆ ಓದಬೇಕು.
ಭಾರಿ ಮಳೆ ಬಂತೆಂದರೆ ಸಾಕು, ಸಾಕಷ್ಟು ಆತಂಕ ಎದುರಾಗಿಬಿಡುತ್ತದೆ. ನಿರಂತರ ಮಳೆ ನೋಡಿಕೊಂಡು ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸುತ್ತಾರೆ. ಕೆಲವೊಮ್ಮೆ ಒಂದು ದಿನ ಮುಂಚಿತವಾಗಿಯೇ ದಿಢೀರ್ ರಜೆ ನೀಡಿ ಆದೇಶಿಸುತ್ತಾರೆ. ಹವಾಮಾನ ವೈಪರೀತ್ಯ, ಧಾರಾಕಾರ ಮಳೆ, ಇನ್ನಿತರ ಕ್ಲಿಷ್ಟ ಸಂದರ್ಭಗಳಲ್ಲಿ ಅಂದಿನ ಸನ್ನಿವೇಶ ನೋಡಿಕೊಂಡು ಈ ಶಾಲಾ ರಜೆ ಆದೇಶವನ್ನು ಕಾಲೇಜುಗಳಿಗೂ ವಿಸ್ತರಣೆ ಮಾಡುತ್ತಾರೆ.

ಇತ್ತೀಚೆಗೆ ಶಾಲೆಗಳಿಗೆ ರಜೆ ಘೋಷಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನೀವೇ ಅದೃಷ್ಟವಂತರು, ಮೇಲಿಂದ ಮೇಲೆ ರಜೆ ಸಿಗುತ್ತದೆ. ನೀವು ಅರಾಮ್ ಎಂದು ಟ್ರೋಲ್ ಮಾಡುತ್ತಾರೆ. ಟೀಕಿಸಿ ಅಪಹಾಸ್ಯ ಮಾಡುತ್ತಾರೆ. ಅಂತವರು ಜಿಲ್ಲಾಧಿಕಾರಿಗಳ ಕಾಳಜಿ, ಮುಂಜಾಗ್ರತೆ ಬಗ್ಗೆ ತಿಳಿದಿರುವುದಿಲ್ಲ.
ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿಯ ಅರಿವು...
ಸಾಮಾನ್ಯವಾಗಿ ಭಾನುವಾರ, ಇತರ ಜಯಂತಿಗಳು, ವಿಶೇಷ ಸಂದರ್ಭಗಳಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಮಳೆ ಬಂದರೆ ಮುಂಜಾಗ್ರತಾ ಕ್ರಮವಾಗಿ, ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ನಿರಂತರವಾಗಿ ಹವಾಮಾನ ಇಲಾಖೆ ಹಾಗೂ ಇತರ ಇಲಾಖೆ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿರುತ್ತದೆ. ಸನ್ನಿವೇಶ, ಹವಾಮಾನ ವೈಪರೀತ್ಯಗಳು, ಸಂಭವನೀಯ ಅವಘಡ ಅರಿತುಕೊಂಡು ರಜೆ ನೀಡುತ್ತಾರೆ.

ಮಲೆನಾಡಿನಂತಹ ಪ್ರದೇಶಗಳಲ್ಲಿ ನದಿ ಹರಿವು ಹೆಚ್ಚಿರುತ್ತದೆ. ಹಳ್ಳ-ಕೊಳ್ಳಗಳು ತುಂಬಿರುತ್ತವೆ. ಮಕ್ಕಳು ಸಣ್ಣ ಸಣ್ಣ ತೊರೆಗಳನ್ನು, ಹಳ್ಳಗಳು, ಸಣ್ಣ ಸೇತುವೆಗಳನ್ನು ದಾಟಿಕೊಂಡು ಶಾಲೆಗಳಿಗೆ ಹೋಗಿ ಬರಬೇಕಾಗುತ್ತದೆ. ಗುಡ್ಡ ಕುಸಿತದ ಸಂಭವವಿರುತ್ತದೆ. ಹೀಗಿದ್ದಾಗ ಮಕ್ಕಳು ಸುರಕ್ಷತೆ ಮುಖ್ಯ. ಒಂದು ವೇಳೆ ರಜೆ ಕೊಡದಂತೆ ಭಾರೀ ಮಳೆಯಲ್ಲೂ ಶಾಲೆಗಳಿಗೆ ಮಕ್ಕಳು ಹೋಗುವಾಗ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಆಗಲೂ ಜಿಲ್ಲಾಧಿಕಾರಿಗಳನ್ನೇ (ಸರ್ಕಾರ) ಹೊಣೆ ಮಾಡಲಾಗುತ್ತದೆ.
ರಜೆ ಆದೇಶಕ್ಕೂ ಮೊದಲು ಮಳೆ ಪ್ರಮಾಣ, ಪರಿಸ್ಥಿತಿ ಗಮನಿಸಲಾಗುತ್ತದೆ. ಡಿಸಿಗಳ ಪ್ರಥಮ ಆದ್ಯತೆ ಅಂಗನವಾಡಿಗಳಿಂದ ಎಸ್‌ಎಸ್‌ಎಲ್‌ಸಿವರೆಗೆ ರಜೆ ನೀಡುವುದು ಆಗಿರುತ್ತದೆ. ಏಕೆಂದರೆ ಸೈಕಲ್ ಸವಾರಿ, ನದಿ ತೊರೆ ದಾಟಿ, ಏಕಾಂಗಿ ಸಂಚಾರ ಮಾಡಿ, ಗುಡ್ಡ ಹತ್ತಿ ಇಳಿದು ಮಕ್ಕಳು ಶಾಳೆಗೆ ಸಾಗಬೇಕಾಗಿರುತ್ತದೆ. ''ಭಾರೀ ಮಳೆಗೆ ವೇಳೆ ನೀರಲ್ಲಿ ಆಟವಾಡುವುದು, ಕಾಗದ ದೋಣಿ ಬಿಡುವುದು, ಧುಮುಕುವ ನೀರನ್ನು, ಹಳ್ಳ-ಬಾವಿಗಳನ್ನು ಇಣುಕಿ ನೋಡಲು ಮುಂದಾಗುವುದು, ಕಲ್ಲಿನ ಬಂಡೆಗಳ ಮೇಲೆ ಆಟವಾಡುವುದು ಇವೆಲ್ಲ ಮಾಡುವ ಸಾಧ್ಯತೆ'' ಇರುತ್ತದೆ. ಬಾಲ್ಯದಲ್ಲಿ ಈ ಮಕ್ಕಳಿಗೆ ವಿವೇಚನೆ ಶಕ್ತಿ ಕಡಿಮೆ ಇರುತ್ತದೆ. ರಜೆ ನೀಡದಿದ್ದರೆ, ಈ ಎಲ್ಲ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಜೆ ನೀಡಿ ಮಕ್ಕಳನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡಲಾಗುತ್ತದೆ.
ಅಧಿಕಾರಿಗಳ ಕಾಳಜಿ ಗೌರವಿಸಬೇಕು
ಭಾರೀ ಮಳೆ ಆದಾಗ, ಪರಿಸ್ಥಿತಿ ಅವಲೋಕಿಸುವ ಶಕ್ತಿ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಲ್ಲಿ ಇರುವುದಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ಬುದ್ಧಿ ಉಪಯೋಗಿಸಿ ನಿರ್ಧರಿಸುವ ಗುಣ ಅವರಲ್ಲಿ ತೀರಾ ಕಡಿಮೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಹೀಗೆ ಅಗತ್ಯ ಎಚ್ಚರಿಕೆ ಕ್ರಮದ ಭಾಗವಾಗಿ ಶಾಲೆಗಳಿಗೆ ಮಳೆಗಾಲದಲ್ಲಿ ರಜೆ ನೀಡುತ್ತಾರೆ. ಅದನ್ನು ಅಪಹಾಸ್ಯ ಮಾಡದೇ ಗೌರವಿಸಬೇಕು. ಜವಾಬ್ದಾರಿ ಮೆರೆಯುವ ಅಧಿಕಾರಿಗಳ ಕಾಳಜಿ ಏನೆಂಬುದನ್ನು ನೋಡಬೇಕು.
ಹೀಗೆ ಮೇಲಿಂದ ಮೇಲೆ ರಜೆ ಘೋಷಣೆ ಆದರೂ ಸಹಿತ ಮೂರು ನಾಲ್ಕು ತಿಂಗಳು ಶನಿವಾರ ಹೆಚ್ಚುವರಿ ತರಗತಿ ತೆಗೆದುಕೊಳ್ಳುವ ಮೂಲಕ ಪಠ್ಯಕ್ರಮ, ಅಭ್ಯಾಸ ಪೂರ್ಣಗೊಳಿಸಲು ಅವಕಾಶ ಇರುತ್ತದೆ. ಬದುಕಿಳಿದರೆ ಶಿಕ್ಷಣ ಕಲಿಯಬಹುದಾಗಿದೆ. ಶಾಲೆಗಳಿಗೆ ಮಳೆ ರಜೆ ಘೋಷಣೆಯನ್ನು ವಿವೇಚನಾತ್ಮಕವಾಗಿ ಪರಿಗಣಿಸಬೇಕಿದೆ.












Click it and Unblock the Notifications