ಹೈಕಮಾಂಡ್ ನಾಯಕರ ಭೇಟಿ: ಸಿಎಂ ಡಿಸಿಎಂ ಸ್ಥಾನ ಕೇಳಿದ್ರಾ ಸತೀಶ್ ಜಾರಕಿಹೊಳಿ ?
Satish Jarkiholi Respond to Speculation: ಬೆಂಗಳೂರು,ಡಿಸೆಂಬರ್ 26: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸರ್ಕಾರ ರಚಿಸಿರುವ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನಗಗೊಂಡಿದ್ದು, ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ನಾನು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದು ನಿಜ. ಆದರೆ, ನಾನು ಸಿಎಂ, ಡಿಸಿಎಂ ಹುದ್ದೆ ಕೊಡುವಂತೆ ಹೇಳಿಲ್ಲ. ಲೋಕಸಭಾ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನನಗೆ ಹುದ್ದೆ ನೀಡುವುದು, ಬಿಡುವುದು ಪಕ್ಷದ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೀಡುವಂತೆ ನಾನೇನೂ ಕೇಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಟಿಕೆಟ್ ಕುರುಬರಿಗೆ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್ ನೀಡಲು ಚಿಂತನೆ ಮಾಡಲಾಗುತ್ತಿದೆ ಎಂದು ನಾನು ಕುರುಬರ ಸಮಾವೇಶದಲ್ಲಿ ಹೇಳಿದ್ದೆ ನಿಜ. ಆದರೆ, ಚಿಕ್ಕೋಡಿ ಕ್ಷೇತ್ರದಿಂದ ಇಬ್ಬರು ಕುರುಬ ಸಮುದಾಯಕ್ಕೆ ಸೇರಿದ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ಹಿಜಾಬ್ ನಿಷೇದ ವಾಪಸ್ ಪಡೆಯುದರ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಹಿಜಾಬ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನಮ್ಮ ಸರ್ಕಾರದ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಂಚೆ ತರಗತಿಯಲ್ಲಿ ಹಿಜಾಬ್ ಧಾರಣೆಗೆ ಅವಕಾಶ ಇತ್ತು. ಹಿಂದಿನ ಸರ್ಕಾರ ಹಿಜಾಬ್ ನಿಷೇಧ ಮಾಡಿತ್ತು, ನಾವು ಅದನ್ನು ಹಿಂಪಡೆಯುತ್ತೇವೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ ರೈತರ ವಿಚಾರದಲ್ಲಿ ನೀಡಿದ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಒಮ್ಮೊಮ್ಮೆ ಗಾಡಿಗಳು ಓವರ್ ಸ್ಪೀಡ್ ಹೋಗುತ್ತವೆ. ಆಗ ಆಕ್ಸಿಡೆಂಟ್ ಆಗುತ್ತವೆ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲ ಏನೋ ಹೇಳಲು ಹೋಗಿದ್ದಾರೆ. ಒಮ್ಮೊಮ್ಮೆ ಯಡವಟ್ಟು ಆಗುತ್ತದೆ. ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲ ಬಂದರೆ ರೈತ ಅಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳ ಮೇಲೂ ಎಫೆಕ್ಟ್ ಇದೆ ಎಂದು ಹೇಳಿದರು.












Click it and Unblock the Notifications