ಸಿದ್ದರಾಮಯ್ಯ ಅವರ ರಾಜೀನಾಮೆ ನನಗೂ ಭಾವುಕ ಕ್ಷಣ: ಸಚಿವ ಸತೀಶ್ ಜಾರಕಿಹೊಳಿ ಪೋಸ್ಟ್, ಅಹಿಂದ ಹೋರಾಟದ ದಿನಗಳ ಮೆಲುಕು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಅತ್ಯಂತ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನನಗೆ ಮಾತ್ರವಲ್ಲದೆ, ರಾಜ್ಯದ ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಹೋರಾಟಗಾರರಿಗೆ ಭಾವುಕ ಕ್ಷಣ ಎಂದು ಅವರು ಹೇಳಿದ್ದಾರೆ.

ಬಡತನದಿಂದ ಬಂದ ಅಪರೂಪದ ನಾಯಕ

ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಅವರೊಂದಿಗಿನ ಸುದೀರ್ಘ ರಾಜಕೀಯ ಪಯಣವನ್ನು ನೆನಪಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿಗಳ ಜನಪರ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ ಅವರ ಹಿನ್ನೆಲೆಯನ್ನು ಸ್ಮರಿಸಿರುವ ಸತೀಶ್ ಜಾರಕಿಹೊಳಿ, "ಸಿದ್ದರಾಮಯ್ಯ ಅವರು ಬಡತನ ಮತ್ತು ಶೋಷಿತ ವರ್ಗದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ನಿರಂತರ ಹೋರಾಟ, ಪರಿಶ್ರಮ ಹಾಗೂ ಜನಪರ ಬದ್ಧತೆಯ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಅಪರೂಪದ ನಾಯಕ. ಅವರು ಯಾವುದೇ ಅಧಿಕಾರ ಅಥವಾ ಹುದ್ದೆಯಲ್ಲಿ ಇರಲಿ ಇಲ್ಲದಿರಲಿ, ಸಮಾಜವನ್ನು ಮುನ್ನಡೆಸುವ ಅದ್ಭುತ ನಾಯಕತ್ವದ ಶಕ್ತಿ ಅವರಲ್ಲಿದೆ" ಎಂದು ಕೊಂಡಾಡಿದ್ದಾರೆ.

Satish Jarkiholi

ಮಾದರಿಯಾದ 'ನುಡಿದಂತೆ ನಡೆಯುವ' ಗುಣ

ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನಿಲುವನ್ನು ಶ್ಲಾಘಿಸಿರುವ ಸತೀಶ್‌, ಅವರ ನುಡಿದಂತೆ ನಡೆಯುವ ಗುಣ, ಸಾಮಾಜಿಕ ನ್ಯಾಯದ ಮೇಲಿನ ಅಚಲ ನಂಬಿಕೆ ಹಾಗೂ ದಮನಿತ ಮತ್ತು ಹಿಂದುಳಿದ ಸಮುದಾಯಗಳ ಪರ ಇರುವ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಅನುಭವ, ದೂರದೃಷ್ಟಿ ಮತ್ತು ಮಾರ್ಗದರ್ಶನಗಳು ಮುಂದಿನ ದಿನಗಳಲ್ಲೂ ಸರ್ಕಾರಕ್ಕೆ, ಪಕ್ಷಕ್ಕೆ ಹಾಗೂ ಇಡೀ ಸಮಾಜಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಅಹಿಂದ' ಚಳವಳಿಯ ದಿನಗಳ ನೆನಪು

ಸಿದ್ದರಾಮಯ್ಯ ಅವರೊಂದಿಗೆ ತಮಗಿರುವ ಆತ್ಮೀಯ ಒಡನಾಟವನ್ನು ಹಂಚಿಕೊಂಡಿರುವ ಸತೀಶ್ ಜಾರಕಿಹೊಳಿ, ತಳಮಟ್ಟದ ಹೋರಾಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಚಳವಳಿಯ ಹೋರಾಟದ ಆರಂಭಿಕ ದಿನಗಳಿಂದಲೇ ಅವರೊಂದಿಗೆ ಹೆಜ್ಜೆ ಹಾಕುವ ಅವಕಾಶ ದೊರೆತಿರುವುದು ನನ್ನ ಪಾಲಿನ ಹೆಮ್ಮೆಯ ಸಂಗತಿ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಗಳಲ್ಲಿ ವಿವಿಧ ಪ್ರಮುಖ ಖಾತೆಗಳನ್ನು ಸಚಿವರಾಗಿ ಯಶಸ್ವಿಯಾಗಿ ನಿಭಾಯಿಸಿದ ಆತ್ಮಸಂತೃಪ್ತಿ ನನಗಿದೆ ಎಂದು ಹೇಳಿದ್ದಾರೆ.

"ಸಿದ್ದರಾಮಯ್ಯ ಅವರ ರಾಜಕೀಯ ಪಯಣವು ಕೇವಲ ಅಧಿಕಾರದ ಸುತ್ತ ಸೀಮಿತವಾಗಿರಲಿಲ್ಲ. ಅದು ಸಂವಿಧಾನದ ಆಶಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿರಂತರ ಹೋರಾಟವಾಗಿತ್ತು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಅಹಿಂದ ಸಮುದಾಯಗಳ ಸಬಲೀಕರಣಕ್ಕಾಗಿ ಅವರು ನೀಡಿರುವ ಕೊಡುಗೆ ಚಿರಸ್ಥಾಯಿಯಾಗಿರಲಿದೆ. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿದಿದ್ದರೂ, ಅವರ ಸಾರ್ವಜನಿಕ ಜೀವನವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಮುಂದುವರಿಯಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಮುಂಬರುವ ದಿನಗಳಲ್ಲೂ ಅವರು ನಾಡಿನ ಒಟ್ಟಾರೆ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಹಿತ ರಕ್ಷಣೆಗಾಗಿ ಸೂಕ್ತ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿ ಎಂದು ಸತೀಶ್ ಜಾರಕಿಹೊಳಿ ಅವರು ಶುಭ ಹಾರೈಸಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಹೊಸ ಆಡಳಿತಾತ್ಮಕ ಬದಲಾವಣೆಗಳ ಚರ್ಚೆ ಶುರುವಾಗಿರುವ ಬೆನ್ನಲ್ಲೇ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರ ಈ ಪೋಸ್ಟ್ ಈಗ ರಾಜಕೀಯ ವಲಯದಲ್ಲಿ ಭಾರಿ ಗಮನ ಸೆಳೆದಿದೆ.

ಡಿ.ಕೆ.ಶಿವಕುಮಾರ್‌ ಸಿಎಂ ಆದ್ರೆ ಜೆಡಿಎಸ್‌ಗೆ ಅಸ್ತಿತ್ವದ ಆತಂಕ: ಕೇಂದ್ರ ಸಚಿವ ಸ್ಥಾನ ಬಿಟ್ಟು ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ?
ಡಿ.ಕೆ.ಶಿವಕುಮಾರ್‌ ಸಿಎಂ ಆದ್ರೆ ಜೆಡಿಎಸ್‌ಗೆ ಅಸ್ತಿತ್ವದ ಆತಂಕ: ಕೇಂದ್ರ ಸಚಿವ ಸ್ಥಾನ ಬಿಟ್ಟು ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ?

ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?

ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಸಿಎಂ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರ ಹೆಸರು ಮುಂಚೂಣಿಯಲ್ಲಿದೆ. ಈಗಾಗಲೇ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಕೆಶಿ ಅವರಿಗೆ ಈ ಬಾರಿ ಮುಖ್ಯಮಂತ್ರಿ ಪಟ್ಟ ಒಲಿಯುತ್ತಿದೆ. ಇದಕ್ಕೆ ಪೂರಕವಾಗಿ ಹೈಕಮಾಂಡ್ ಮಟ್ಟದಲ್ಲೂ ಸಂಭಾವ್ಯ ನಾಯಕತ್ವ ಬದಲಾವಣೆಯ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ.

ಕಾಂಗ್ರೆಸ್ ಪಕ್ಷದಲ್ಲಿ 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಎಂಬ ನಿಯಮವಿರುವುದರಿಂದ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಅವರು ತಮ್ಮ ಹಾಲಿ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಡಿಕೆಶಿ ಅವರಿಂದ ತೆರವಾಗಲಿರುವ ಈ ಅತ್ಯಂತ ಪ್ರಮುಖ ಜವಾಬ್ದಾರಿಗೆ ಸದ್ಯ ಲೋಕೋಪಯೋಗಿ ಸಚಿವರಾಗಿರುವ ಮತ್ತು ಅಹಿಂದ ವರ್ಗದ ಪ್ರಭಾವಿ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರ ಹೆಸರು ಅತ್ಯಂತ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಗಾಸಿಪ್‌ಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸತೀಶ್ ಜಾರಕಿಹೊಳಿ ಅವರೊಂದಿಗೆ ಈ ಕುರಿತು ಪ್ರಾಥಮಿಕ ಚರ್ಚೆ ನಡೆಸಿದೆ ಎನ್ನಲಾಗಿದೆ. ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ತಾನಾಗಿಯೇ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುವಂತೆ ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+