ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಾ ರಾ ಮಹೇಶ್
Recommended Video

ಬೆಂಗಳೂರು, ಸೆಪ್ಟೆಂಬರ್ 12: ಅತ್ತ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯುವ ಮೂಲಕ ಸಮ್ಮಿಶ್ರ ಸರ್ಕಾರ ಉರುಳಿಸಿ ಸರ್ಕಾರ ರಚನೆಗೆ ಬಿಜೆಪಿ ತಂತ್ರ ರೂಪಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ.
ಪಕ್ಷ ಮತ್ತು ಮುಖಂಡರ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿಯ ಶಾಸಕರನ್ನು ಗುರುತಿಸಿ ಕಾಂಗ್ರೆಸ್‌ಗೆ ಕರೆತರುವಂತೆ 'ಕೈ' ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಇದಕ್ಕಾಗಿ ಅಧಿಕಾರ ತ್ಯಾಗಮಾಡಬಲ್ಲ ಪಕ್ಷದ ಶಾಸಕರನ್ನು ಗುರುತಿಸುವಂತೆ ಮುಖಂಡರಿಗೆ ನಿರ್ದೇಶಿಸಿದೆ. ಬಿಜೆಪಿಯಿಂದ ಬರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಇದರ ನಡುವೆಯೇ ಜೆಡಿಎಸ್ ನಾಯಕ, ಸಚಿವ ಸಾರಾ ಮಹೇಶ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಸಾ.ರಾ. ಮಹೇಶ್ ಎಚ್ಚರಿಕೆ
ಬಿಜೆಪಿಯವರು ಆಪರೇಷನ್ ಕಮಲಕ್ಕೆ ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಚಿವ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಪಕ್ಷದ ಎಲ್ಲ ಶಾಸಕರೂ ಒಳ್ಳೆಯವರಿದ್ದಾರೆ. ಬೆಜೆಪಿಯ ಶಾಸಕರನ್ನು ನಾವು ಸೆಳೆದರೆ ಅವರಿಗೆ ಅರ್ಥವಾಗುತ್ತದೆ. ಜೆಡಿಎಸ್ ಶಾಸಕರು ಮತ್ತು ನಾಯಕರ ಶಕ್ತಿ ಬಿಜೆಪಿಗೆ ಗೊತ್ತಾಗುತ್ತದೆ ಎಂದು ಮಹೇಶ್ ಹೇಳಿದ್ದಾರೆ.

10 ಶಾಸಕರು ಸಂಪರ್ಕದಲ್ಲಿ
ನಾನೂ 20 ವರ್ಷ ಬಿಜೆಪಿಯಲ್ಲಿದ್ದವನು. ಪಕ್ಷದ ಬಗ್ಗೆ ಚೆನ್ನಾಗಿ ತಿಳಿದಿದೆ. ಬಿಜೆಪಿಯ ಕೆಲವು ಶಾಸಕರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. 10 ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ನಮಗೂ ರಾಜಕಾರಣ ಬರುತ್ತದೆ. ಸರ್ಕಾರ ರಚನೆಯಾಗಿ ಮೂರು ನಾಲ್ಕು ತಿಂಗಳಾಗಿದೆಯಷ್ಟೇ. ನಮ್ಮ ಶಾಸಕರಿಗೆ ಇಲ್ಲಸಲ್ಲದ ಆಸೆ ತೋರಿಸಿ ಅವರನ್ನು ಸೆಳೆಯುವ ವ್ಯರ್ಥ ಪ್ರಯತ್ನ ಮಾಡಬಾರದು ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ನಿಷ್ಠರ ಪಟ್ಟಿಗೆ ಸೂಚನೆ
ಬಿಜೆಪಿಯಲ್ಲಿ ಅನೇಕ ಶಾಸಕರು ಅಧಿಕಾರಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೆ, ಪಕ್ಷದ ಮುಖಂಡರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅಂತಹವರನ್ನು ಗುರುತಿಸಿ ಪಕ್ಷಕ್ಕೆ ಕರೆದು ತರಬೇಕು. ಜತೆಗೆ ಪಕ್ಷದಲ್ಲಿನ ನಿಷ್ಠಾವಂತ ಸಚಿವರನ್ನು ಗುರುತಿಸಿ ಪಟ್ಟಿ ಮಾಡಬೇಕು. ಬಿಜೆಪಿಯಿಂದ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿದ್ಧರಾಗಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಕಾಯುತ್ತಿರುವ ಬಿಎಸ್‌ವೈ
ಕಾಂಗ್ರೆಸ್‌ನಲ್ಲೊನ ಆಂತರಿಕ ಬೆಳವಣಿಗೆಗಳು ಬಿಜೆಪಿಯಲ್ಲಿ ಹೊಸ ಉತ್ಸಾಹ ಮೂಡಿಸಿದ್ದರೂ, ಜಾರಕಿಹೊಳಿ ಸಹೋದರರ ಬಳಿ ತಾವಾಗಿಯೇ ಹೋಗುವುದು ಬೇಡ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಸೇರುವ ಕುರಿತು ಜಾರಕಿಹೊಳಿ ಸಹೋದರರೇ ಮುಂದೆ ಬಂದು ಪ್ರಸ್ತಾಪಿಸಲಿ ಎಂದು ಅವರು ಕಾಯುತ್ತಿದ್ದಾರೆ. ಜಾರಕಿಹೊಳಿ ಅವರ ಜತೆ 5-7 ಶಾಸಕರು ಇರಬಹುದು. ಉಳಿದಂತೆ ಇನ್ನಷ್ಟು ಶಾಸಕರನ್ನು ಪಕ್ಷಕ್ಕೆ ತರಬೇಕಾಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications