Santro Ravi Anticipatory Bail : ಸ್ಯಾಂಟ್ರೋ ರವಿಗೆ ನಿರೀಕ್ಷಣಾ ಜಾಮೀನು ಸದ್ಯಕ್ಕಿಲ್ಲ
ಬೆಂಗಳೂರು, ಜನವರಿ 12; ಸ್ಯಾಂಟ್ರೊ ರವಿ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲಾಗಿದೆ. ಪೊಲೀಸರು ಸ್ಯಾಂಟ್ರೊ ರವಿಯನ್ನು ಬಂಧಿಸಲು ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಿದ್ದಾರೆ.
ಗುರುವಾರ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಯಾಂಟ್ರೊ ರವಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ.
ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದರು. ಆದ್ದರಿಂದ ಕೋರ್ಟ್ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತು.

ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಗುರುವಾರ ತರಕಾರು ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಈಗ ಜನವರಿ 17ರ ತನಕ ಸ್ಯಾಂಟ್ರೊ ರವಿಗೆ ಜಾಮೀನು ಭಾಗ್ಯವಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದರು. ಪೊಲೀಸರು ಸ್ಯಾಂಟ್ರೊ ರವಿ ಬಂಧನಕ್ಕಾಗಿ 11 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗುರುವಾರ ಪೊಲೀಸರು ರಾಮನಗರದಲ್ಲಿ ಸ್ಯಾಂಟ್ರೊ ರವಿ ಬಂಧಿಸಲು ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆತನ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸ್ಯಾಂಟ್ರೊ ರವಿ ವಿಚಾರ ಕರ್ನಾಟಕದ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ರವಿ ಬಂಧನ ವಿಳಂಬವಾಗುತ್ತಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವೀಟ್ ಮಾಡಿ ಟೀಕೆ ಮಾಡುತ್ತಿದೆ.












Click it and Unblock the Notifications