ನಮ್ಮ ಮೊದಲ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು : ಸಲೀಂ ಅಹ್ಮದ್
ಬೆಂಗಳೂರು,ಡಿಸೆಂಬರ್15 : ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಗುರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಹೇಳಿದರು.
ಮುಸ್ಲಿಂ ನಾಯಕರ ಸಭೆಯಲ್ಲಿ ಮುಸ್ಲಿಂ ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡಲಾಗಿದೆಯೇ ಎಂಬ ವಿಚಾರವಾಗಿ ಮಾತನಾಡಿ 'ಅಂತಹ ಯಾವುದೇ ಚರ್ಚೆ ಇಂದಿನ ಸಭೆಯಲ್ಲಿ ಆಗಿಲ್ಲ. ನಮ್ಮ ಮೊದಲ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು, ಜನವಿರೋಧಿ ಸರ್ಕಾರ ಕಿತ್ತೊಗೆಯುವುದಾಗಿದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ನಮ್ಮ ಬೇಡಿಕೆಗಳನ್ನು ನಾವು ಪಕ್ಷ ಹಾಗೂ ಸರ್ಕಾರದ ಗಮನಕ್ಕೆ ತರುತ್ತೇವೆಂದು ತಿಳಿಸಿದರು.
ಪಕ್ಷ ಬಿಟ್ಟಿರುವ ಮುಸಲ್ಮಾನ ನಾಯಕರನ್ನು ಮತ್ತೆ ಕರೆತರುವ ಬಗ್ಗೆ ಚರ್ಚೆ ಆಯಿತೇ ಎಂದು ಕೇಳಿದಾಗ "ಈ ಬಗ್ಗೆ ಇಂದು ಚರ್ಚೆ ಮಾಡಿಲ್ಲ, ಮತದಾರರ ಹೆಸರು ಸೇರ್ಪಡೆ, ಪಕ್ಷ ಸಂಘಟನೆ ಹಾಗೂ ಸಮಾವೇಶ ಹಾಗೂ ಟಿಕೆಟ್ ವಿಚಾರವಾಗಿ ಮಾತ್ರ ಇಂದು ಚರ್ಚೆ ಮಾಡಿದ್ದೇವೆ' ಎಂದರು.

ಮಹದಾಯಿ ವಿಚಾರವಾಗಿ ಒಂದು ಹೋರಾಟ ಸಾಕೇ ಎಂಬ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ಈ ವಿಚಾರವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಕಾರಜೋಳ ಅವರು ದಿನಬೆಳಗಾದರೇ ಬರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ನಿಟ್ಚಿನಲ್ಲಿ ಕಾರ್ಯೋನ್ಮುಖವಾಗಿಲ್ಲ. ಬಿಜೆಪಿ ತಮ್ಮ ಪ್ರನಾಳಿಕೆಯಲ್ಲಿ ಮಹದಾಯಿ, ಕೃಷ್ಣ, ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇವೆಂದು ಹೇಳಿದ್ದರು.
ಈ ಯೋಜನೆಗಳ ಅನುಷ್ಠಾನಕ್ಕೆ ಇದುವರೆಗೂ ಯಾವುದೇ ರೀತಿ ತೀರ್ಮಾನ ಮಾಡಿಲ್ಲ. ನೀರಾವರಿಗೆ 1.50 ಲಕ್ಷ ಕೋಟಿ ನೀಡುವುದಾಗಿ ತಿಳಿಸಿದ್ದರು. ಚುನಾವಣೆಗೆ ಕೇವಲ 4 ತಿಂಗಳು ಬಾಕಿ ಇದ್ದು, ಇದರ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಅಧಿವೇಶನದಲ್ಲಿ ನಾವು ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ನಾವು ಎಷ್ಟೇ ಹೋರಾಟ ಮಾಡಿದರೂ ಈ ಸರ್ಕಾರಕ್ಕೆ ಬದ್ಧತೆ ಇರಬೇಕಲ್ಲ ಎಂದು ಟೀಕಿಸಿದರು.

ಈ ಬಾರಿ ಮುಸ್ಲಿಂ ಶಾಸಕರ ಸಂಖ್ಯೆ ಎರಡಂಕಿಗೆ ಹೋಗುತ್ತದೆಯೇ ಎಂಬ ವಿಚಾರವಾಗಿ ಮಾತನಾಡಿ, ಹಿಂದೆ ಹಲವು ಬಾರಿ 12ರಿಂದ 17 ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದೆವು. ಈ ಬಾರಿಯೂ ಹೆಚ್ಚಿನ ಅಲ್ಪಸಂಖ್ಯಾತ ಶಾಸಕರು ಆಯ್ಕೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಳಿದಾಗ, 'ಇದು ದಪ್ಪ ಚರ್ಮದ ಸರ್ಕಾರ. ಮಹಾರಾಷ್ಟ್ರ ಸೇರಿದಂತೆ ತ್ರಿಬಲ್ ಬಿಜೆಪಿ ಇಂಜಿನ್ ಸರ್ಕಾರವಿದೆ. ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಿರಿ ಎಂದರೂ ಕರೆದಿಲ್ಲ. ಸರ್ಕಾರ ಗಟ್ಟಿ ತೀರ್ಮಾನ ಕೈಗೊಳ್ಳಬೇಕು. ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ' ಎಂದು ಹೇಳಿದರು.
ಕಾಂಗ್ರೆಸ್ ಮತ ವಿಭಜನೆಗೆ ಮುಸಲ್ಮಾನ ಸಮುದಾಯದ ಸ್ಟಾರ್ ಪ್ರಚಾರಕರು ಬರುವ ವಿಚಾರವಾಗಿ ಮಾತನಾಡಿ, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದ ಮೇಲೆ ಮತಹಾಕುತ್ತಾರೆ. ಸಿಂದಗಿ, ಹಾನಗಲ್ ಚುನಾವಣೆ ಸಮಯದಲ್ಲೂ ಈ ಸ್ಟಾರ್ ಪ್ರಚಾರಕರು ಬಂದಿದ್ದರು. ಆದರೂ ಎಷ್ಟು ಮತಗಳನ್ನು ಪಡೆದರು. ಈ ಚುನಾವಣೆಯಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ. ಇದು ಜಾತ್ಯಾತೀತ ಹಾಗೂ ಕೋಮುವಾದದ ವಿರುದ್ಧದ ಹೋರಾಟ. ಜನ ಈ ಸರ್ಕಾರದ ವಿರುದ್ಧ ಭ್ರಮನಿರಸನಾಗಿದ್ದಾರೆ.
ಬಿಜೆಪಿಯವರಿಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು? ಅಡುಗೆ ಅನಿಲದ ಬೆಲೆ 400 ಸಾವಿರಕ್ಕೆ ಏರಿಕೆಯಾಗಿದ್ದಕ್ಕಾ? ಪೆಟ್ರೋಲ್ ಬೆಲೆ 50ರಿಂದ 100 ರೂ. ಆಗಿದ್ದಕ್ಕಾ? ಯುವಕರಲ್ಲಿ ನಿರುದ್ಯೋಗ ಹೆಚ್ಚಾಗಿರುವುದಕ್ಕಾ? ರೈತರು ಕಂಗಾಲಾಗಿದ್ದಾರೆ ಅದಕ್ಕೆ ಮತ ಹಾಕಬೇಕಾ? ಬಡವರಿಗೆ ಮನೆ ಕೊಟ್ಟಿಲ್ಲ ಅದಕ್ಕಾಗಿ ಮತ ಹಾಕಬೇಕಾ? ಯಾವ ಘನಕಾರ್ಯಕ್ಕಾಗಿ ಬಿಜೆಪಿಗೆ ಜನ ಆಶೀರ್ವಾದ ಮಾಡಬೇಕು. ಅವರು ಜನಾಶೀರ್ವಾದ ಯಾತ್ರೆ ಬದಲು ಜನರ ಕ್ಷಮೆ ಕೇಳುವ ಯಾತ್ರೆ ಮಾಡಬೇಕು. ಮೋದಿ ಅವರು ನಮ್ಮ ಸರ್ಕಾರ ತನ್ನಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದರು.
ದೇಶವನ್ನು ಸ್ವರ್ಗ ಮಾಡುತ್ತೇವೆ ಎಂದು ನರಕ ತೋರಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಮೋದಿ ಅವರು ಎಷ್ಟು ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳುವುದಕ್ಕೆ ಆಸ್ಕರ್ ಅವಾರ್ಡ್ ನೀಡಿದರೆ ಅದು ಮೋದಿ ಅವರಿಗೆ ಸಲ್ಲುತ್ತದೆ. ಕೇವಲ ಮನ್ ಕಿ ಬಾತ್ ನೀಡಿದರೆ ಸಾಲದು ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಲಿ. ಅಧಿಕಾರಕ್ಕೆ ಬಂದರೆ 15 ಲಕ್ಷ ನೀಡುತ್ತೇವೆ, ಉದ್ಯೋಗ ನೀಡುತ್ತೇವೆ ಎಂದರು. ಗುಜರಾತ್ ಚುನಾವಣೆ ಗೆದ್ದಿದ್ದೇವೆ ದು ಬೀಗುತ್ತಿದ್ದಾರೆ. ಅದೇ ಹಿಮಾಚಲ ಪ್ರದೇಶ ಚುನಾವಣೆ ಸೋಲಿನ ಬಗ್ಗೆ ಯಾಕೆ ಮಾತನಾಡುವುದಿಲ್ಲ? ನಾವು ನಮ್ಮ ತಪ್ಪಿನಿಂದ ಗುಜರಾತಿನಲ್ಲಿ ಸೋತಿದ್ದೇವೆ. ಅದನ್ನು ಒಪ್ಪುತ್ತೇವೆ. ಆದರೆ ಅವರು ಶಕ್ತಿಶಾಲಿಯಾದರೆ ನಮ್ಮ ಪಕ್ಷದ ನಾಯಕರಿಗೆ ಐಟಿ, ಇಡಿ ಮೂಲಕ ಬೆದರಿಸಿ ಅವರ ಪಕ್ಷಕ್ಕೆ ಸೇರಿಸಿಕೊಂಡಿದ್ದು ಯಾಕೆ? ಇದೆಲ್ಲದಕ್ಕೂ ಜನ 2023 ಹಾಗೂ 2024ರಲ್ಲಿ ಉತ್ತರ ನೀಡುತ್ತಾರೆ.
ಮೋದಿ ಅವರಿಂದ ಗುಜರಾತ್ ಚುನಾವಣೆ ಗೆದ್ದಿರುವುದಾದರೆ, ಮೋದಿ ಅವರಿಂದಲೇ ಹಿಮಾಚಲ ಪ್ರದೇಶ ಸೋತಿದ್ದಾರೆ ಅಲ್ಲವೇ? ಗೆದ್ದರೆ ಮೋದಿ ಅವರ ಕೊಡುಗೆ, ಸೋತರೆ ಸ್ಥಳೀಯ ನಾಯಕರು ಕಾರಣವೇ? ಇದು ಬಿಜೆಪಿಯ ಇಬ್ಬಗೆ ನೀತಿ. ಮೋದಿ ಅವರ ಹೇಳಿಕೆ ಜನರಿಗೆ ಅರಿವಾಗಿದೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, 2024ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ' ಎಂದು ತಿಳಿಸಿದರು.












Click it and Unblock the Notifications