• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳ ಪಾಲಕರಿಗೆ ಭಾವನಾತ್ಮಕ ಮನವಿ ಮಾಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್!

|

ಬೆಂಗಳೂರು, ಡಿ. 31: ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.

   ಮಕ್ಕಳನ್ನು ಶಾಲೆಗೆ ಕಳುಹಿಸೋದು ಎಷ್ಟರ ಮಟ್ಟಿಗೆ ಸುರಕ್ಷಿತ | Oneindia Kannada

   ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳು ಸುರಕ್ಷಿತ ವಾತಾವರಣದಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಾ ದಿನವಾದ ಗುರುವಾರ ರಾಜ್ಯದ ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡಿರುವ ಅವರು, ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆ ಮಕ್ಕಳ ಇನ್ನೊಂದು ಮನೆಯಾಗಿರಲಿದ್ದು, ಶಾಲಾ ವಿದ್ಯಾಲಯ ಸುರಕ್ಷಿತಾಲಯವಾಗಿರಲಿದೆ ಎಂದು ಭರವಸೆ ನೀಡುವೆ ಎಂದು ಅಭಯ ನೀಡಿದ್ದಾರೆ.

   'ಕೊರೋನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ' ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಶಾಲೆಗಳು ಮುಚ್ಚಿಕೊಂಡಿದ್ದವು, ಮೈದಾನಗಳು ಬಿಕೋ ಎನ್ನುತ್ತಿದ್ದವು. ಅದೆಲ್ಲಕ್ಕೂ ಅಂತ್ಯವೆಂಬಂತೆ ಶಾಲೆಗಳು ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಮ್ಮ ಒಪ್ಪಿಗೆ ಪತ್ರ ನೀಡಿ ಕಳಿಸಬೇಕು ಎಂದು ಸಚಿವರು ಹೇಳಿದ್ದಾರೆ. ಶಾಲೆಗಳು ಆರಂಭವಾಗುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮಕ್ಕಳಂತೂ ಶಾಲೆಯಲ್ಲಿ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿ ಶಾಲೆ ಆರಂಭವಾಗು ಕ್ಷಣಗಣನೆಯಲ್ಲಿದ್ದಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

   ಕಣ್ಗಾವಲಿನಲ್ಲಿ ಮಕ್ಕಳು

   ಕಣ್ಗಾವಲಿನಲ್ಲಿ ಮಕ್ಕಳು

   ಮಕ್ಕಳಿಗೆ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಕಳಿಸುವುದು ಬೇಡ. ನಮಗೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಿಂತ ಅವರ ಆರೋಗ್ಯವೂ ಸಹ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ. ಪ್ರತಿ ಸಂಜೆಯೂ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಒಬ್ಬ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ.

   ರೋಗ ಲಕ್ಷಣವಿರುವುದು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ನಿಮ್ಮ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

   ಸುರಕ್ಷಿತ ವಿದ್ಯಾಗಮ

   ಸುರಕ್ಷಿತ ವಿದ್ಯಾಗಮ

   ಕೆಲವೇ ತಿಂಗಳಲ್ಲಿ ಮಂಡಳಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳ ಮಕ್ಕಳಿಗೆ ಶಾಲಾ ತರಗತಿಗಳು ಪುಟ್ಟ ಪುಟ್ಟ ತಂಡಗಳಲ್ಲಿ ಸಾಮಾಜಿಕ ಅಂತರದಲ್ಲಿ ಆರಂಭಗೊಂಡರೆ, 6ರಿಂದ 9ನೇ ತರಗತಿಗಳ ಪರಿಷ್ಕೃತ ವಿದ್ಯಾಗಮ ತರಗತಿಗಳು ಸುರಕ್ಷಿತ ಶಾಲಾವರಣದಲ್ಲಿ ನಡೆಯಲಿವೆ. ಶಾಲೆಗಳ ಆರಂಭದ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ತೋರುತ್ತಿರುವ ಉತ್ಸುಕತೆ ನಮಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರೇರಣೆಗೆ ಕಾರಣವಾಗಿವೆ. 2020 ಕೊರೋನ ವರ್ಷವಾದರೆ, 2021ನೇ ವರ್ಷ ಕೊರೊನಾ ಎದುರಿಸುವ ಶಕ್ತಿಯನ್ನು ಪಡೆಯುವ ವರ್ಷವಾಗಿದ್ದು, ಅದು ನಮ್ಮ ಮಕ್ಕಳೇ ನಮಗೆ ನಿದರ್ಶನವಾಗಲಿದ್ದಾರೆ ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

   ಮಕ್ಕಳ ಸುರಕ್ಷತೆ

   ಮಕ್ಕಳ ಸುರಕ್ಷತೆ

   ಶಾಲಾ ತರಗತಿ, ಶಾಲಾವರಣ ಸ್ವಚ್ಛವಾಗಿರಲಿದೆ. ಶೌಚಾಲಯಗಳು ಸ್ವಚ್ಚವಾಗಿರಲಿವೆ. ಮಕ್ಕಳು ಗುಂಪು ಗೂಡುವುದಿಲ್ಲ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೋಷಕರ ಸಹಕಾರ ನಿಜಕ್ಕೂ ದೊಡ್ಡದು, ಮಕ್ಕಳ ಭವಿಷ್ಯವೂ ಇದರಲ್ಲಿ ಪ್ರಮುಖವಾಗಿರುವುದರಿಂದ ನಮ್ಮ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

   ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳಿಸಿಕೊಡಿ, ಶಾಲಾ ತರಗತಿಗಳು ಕೆಲವೇ ಗಂಟೆಗಳ ಕಾಲ ನಡೆಯಲಿವೆ. ಆಯಾ ತರಗತಿಗಳಲ್ಲೇ ಬೆಳಗಿನ ಪ್ರಾರ್ಥನೆ ನಡೆಯಲಿವೆ. ಮಕ್ಕಳು ಗುಂಪುಗುಂಪಾಗಿ ಸೇರುವ ಪ್ರಮೇಯವೇ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮ್ಮ ತಮ್ಮ ಭಾಗದ ಜನಪ್ರತಿನಿಧಿಗಳು ಶಾಲೆಗಳ ಆರಂಭದ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ.

    ಶೀಘ್ರ ನಿರ್ಧಾರ

   ಶೀಘ್ರ ನಿರ್ಧಾರ

   10 ಮತ್ತು 12ನೇ ತರಗತಿಯಂತೆಯೇ ಉಳಿದ ತರಗತಿಗಳನ್ನು ಆರಂಭಿಸಬೇಕೆಂದು ಬಹು ಭಾಗದಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಇಂದಿನ ಶಾಲೆಗಳ ನಡೆಯನ್ನು ಅನುಸರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಂದನಾ ವಾಹಿನಿ ಮೂಲಕ ಪ್ರಸಾರವಾಗುವ ತರಗತಿಗಳು, ಯೂ-ಟ್ಯೂಬ್ ಪಾಠಗಳು ಎಂದಿನಂತೆ ನಡೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

   ಶಾಲಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾರಂಭದ ಸಿದ್ಧತೆಗಳನ್ನು ಪರಿಶೀಲಿಸಿ ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿದರು. ಬೆಂಗಳೂರಿನ ಬಸವನಗುಡಿಯ ಬಿಎಂಎಸ್, ಜಯನಗರದ ಎನ್‍ಎಂಕೆಆರ್ ವಿ, ಬಿಇಎಸ್, ಆರ್.ವಿ., ನ್ಯಾಷನಲ್ ಕಾಲೇಜು, ವಿಜಯ ಕಾಲೇಜು ಸೇರಿದಂತೆ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.

   English summary
   It is our responsibility to ensure the safety of the children in the school Educataion Minister Suresh Kumar's sentimental appeal to parents, Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X