Sadananda Gowda: ಸದಾನಂದ ಗೌಡ ಬಿಟ್ಟು ಹೋದ ಕ್ಷೇತ್ರಕ್ಕೆ ಒಕ್ಕಲಿಗ ನಾಯಕಿಗೆ ಸ್ಥಾನಮಾನ?
ಕರ್ನಾಟಕ ಬಿಜೆಪಿಗೆ ಈಗ ಹೊಸ ಹುರುಪು ಬಂದಂತೆ ಕಾಣ್ತಿದೆ. ಅದರಲ್ಲೂ ಮಾಜಿ ಸಿಎಂ ಸದಾನಂದ ಗೌಡರು, ಸಕ್ರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ನಿವೃತ್ತಿ ಘೋಷಣೆ ಮಾಡಿದ ನಂತರ ಸಂಚಲನ ಸೃಷ್ಟಿಯಾಗಿತ್ತು. ಇದೀಗ ಯಡಿಯೂರಪ್ಪರ ಪುತ್ರನಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿ ಎಲ್ಲವನ್ನ ತಿಳಿಯಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ಯತ್ನಿಸುತ್ತಿದ್ದಾರೆ. ಇದೇ ವೇಳೆ ಸದಾನಂದ ಗೌಡರು ಬಿಟ್ಟುಹೋದ ಲೋಕಸಭಾ ಕ್ಷೇತ್ರಕ್ಕೆ ಒಕ್ಕಲಿಗ ನಾಯಕಿ ಹೆಸರು ಕೇಳಿಬಂದಿದೆ.
ಕೆಲವು ದಿನಗಳ ಹಿಂದಷ್ಟೇ ಹಾಸನದಲ್ಲಿ ಮಾತನಾಡುತ್ತಾ ಮಾಜಿ ಸಿಎಂ ಸದಾನಂದ ಗೌಡರು ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ ಸರಿಯುತ್ತಿರುವ ನಿರ್ಧಾರ ಪ್ರಕಟಿಸಿದ್ದರು. 'ಚುನಾವಣಾ ರಾಜಕೀಯದಲ್ಲಿ ಮುಂದುವರಿಯದೇ ಇರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಪಕ್ಷ ಎಲ್ಲವನ್ನ ನೀಡಿದೆ. 10 ವರ್ಷಗಳು ಶಾಸಕನಾಗಿ, 20 ವರ್ಷ ಸಂಸದನಾಗಿ & 1 ವರ್ಷ ಸಿಎಂ ಆಗಿ 4 ವರ್ಷ ಪಕ್ಷದ ರಾಜ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ' ಎಂದಿದ್ರು ಸದಾನಂದ ಗೌಡರು. ಹೀಗೆ ಅವರು ಮುಂದಿನ ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಹೇಳಿದ ಕೆಲವೇ ದಿನದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ?
ಈಗಿನ ಮಾಹಿತಿ ಪ್ರಕಾರ ಒಕ್ಕಲಿಗರ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಮಣೆಹಾಕಲು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೆ ಮತ್ತೊಂದು ಕಡೆ ಹಾಲಿ ಮಂಡ್ಯ ಸಂಸದೆ ಸುಮಲತಾರ ಹೆಸರು ಕೂಡ ಮುನ್ನೆಲೆಗೆ ಬರುತ್ತಿದೆ. ಆದರೂ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್ ಅಂತಿವೆ ಮೂಲಗಳು. ಯಾಕೆ ಗೊತ್ತಾ? ಇದರ ಹಿಂದಿನ ಬಿಜೆಪಿ ನಾಯಕರ ಲೆಕ್ಕಾಚಾರ ಏನು?
ಒಂದೇ ಕಲ್ಲಿಗೆ 2 ಗುರಿ ಮುಟ್ಟುವ ಯತ್ನ?
ಹೌದು, ಬಿಜೆಪಿಯ ವರಿಷ್ಠರ ಮೇಲೆ ಈಗ 2 ಜವಾಬ್ದಾರಿ ಇದೆ. ಈ ಪೈಕಿ ಒಂದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಸಿ.ಟಿ. ರವಿ ಅವರನ್ನು ಮತ್ತೆ ಮುನ್ನೆಲೆಗೆ ಕರೆದುಕೊಂಡು ಬರುವುದು. ಮತ್ತೊಂದ್ಕಡೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ಬಿಟ್ಟು ಹೋದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವುದು. ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಇದೇ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರನ್ನು ನಿಲ್ಲಿಸಿ ಗೆಲ್ಲಿಸಿದರೆ ಗುರಿ ಸುಲಭ. ಯಾಕಂದರೆ ಒಂದು ಕಡೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವೂ ಉಳಿಯುತ್ತದೆ. ಮತ್ತೊಂದು ಕಡೆ ಈಗ ಶೋಭಾ ಕರಂದ್ಲಾಜೆ ಅವರು ಸ್ಪರ್ಧೆ ಮಾಡ್ತಿರುವ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಒಕ್ಕಲಿಗ ಮತದಾರರ ಕೋಪ ತಣಿಸಿದಂತೆ ಆಗುತ್ತದೆ.

ಶೋಭಾ ಕರಂದ್ಲಾಜೆ ಅವರಿಗೆ ಮನವಿ?
ಹೀಗೆ ಎರಡೂ ಕಡೆ ಯಾವುದೇ ಎಫೆಕ್ಟ್ ಆಗದಂತೆ ಮಾಡಲು ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಅವರ ಮನಸ್ಸು ಒಲಿಸಲು ಬಿಜೆಪಿ ಹೈಕಮಾಂಡ್ ನಾಯಕರು ಪ್ರಯತ್ನ ಆರಂಭಿಸಿದ್ದಾರೆ ಅನ್ನೋ ಮಾತು ಜೋರಾಗಿದೆ. ಆದರೆ ಯಾವುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಒಂದು ಕಡೆ ಶೋಭಾ ಕರಂದ್ಲಾಜೆ ಅವರಿಗೂ ಉಡುಪಿ & ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಟ್ಟು ಹೋಗಲು ಇಷ್ಟವಿಲ್ಲ. ಹಾಗೇ ಮಂಡ್ಯ ಬಿಟ್ಟು ಬರಲು ಸುಮಲತಾ ಅವರು ರೆಡಿ ಇಲ್ಲ. ಹೀಗಾಗಿಯೇ ಸಾಕಷ್ಟು ಯೋಚಿಸುತ್ತಿದ್ದಾರೆ ಇಬ್ಬರು ನಾಯಕಿಯರು.
ಶಾಸಕಿಯಾಗಿದ್ದ ಶೋಭಾ ಕರಂದ್ಲಾಜೆ
ಅಷ್ಟಕ್ಕೂ ಶೋಭಾ ಕರಂದ್ಲಾಜೆ ಅವರನ್ನು ಇದೀಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಬಿಜೆಪಿ ಚಿಂತನೆ ನಡೆಸುವುದಕ್ಕೆ ಮತ್ತೊಂದು ಕಾರಣವೂ ಇದೆ. ಅದು ಏನೆಂದರೆ, ಈ ಹಿಂದೆ ಶೋಭಾ ಕರಂದ್ಲಾಜೆ ಅವರು ಯಶವಂತಪುರ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು. 2008 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ಕೂಡ ಇದೇ ಯಶವಂತಪುರ ಕ್ಷೇತ್ರದಲ್ಲೇ ಬರುತ್ತೆ. ಹೀಗಾಗಿ ಸ್ಥಳೀಯ ರಾಜಕೀಯದ ನಾಡಿ ಮಿಡಿತವನ್ನ ಶೋಭಾ ಕರಂದ್ಲಾಜೆ ಅವರು ಚೆನ್ನಾಗಿಯೆ ಅರ್ಥ ಮಾಡಿಕೊಂಡಿರುತ್ತಾರೆ ಎಂಬ ಲೆಕ್ಕಾಚಾರ ಕೂಡ ಸಾಗಿದೆ.












Click it and Unblock the Notifications