S.M. Krishna Statue:ಎಸ್.ಎಂ.ಕೃಷ್ಣ ಸ್ಮರಣೆಗೆ ವಿಕಾಸಸೌಧದಲ್ಲಿ ಪ್ರತಿಮೆ ನಿರ್ಮಿಸಿ: ಸಿಎಂಗೆ ಪತ್ರ
ಬೆಂಗಳೂರು: ಹಿರಿಯ ರಾಜಕಾರಣಿ, ದಕ್ಷ ಆಡಳಿತಗಾರ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥ ವಿಕಾಸಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್ ಅವರು ಸಿಎಂ ಡಿ ಕೆ ಶಿವಕುಮಾರ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, ಎಸ್.ಎಂ. ಕೃಷ್ಣ ಅವರು ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿ ರೂಪಿಸಿದವರು.ಅವರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ವಿಕಾಸಸೌಧದ ಆವರಣದಲ್ಲಿ ಅಥವಾ ಸರ್ಕಾರ ಆಯ್ಕೆ ಮಾಡುವ ಸೂಕ್ತ ಸ್ಥಳದಲ್ಲಿ ಅವರ ಪ್ರತಿಮೆ ಸ್ಥಾಪಿಸುವುದರಿಂದ ಆದರ್ಶ ನಾಯಕರಿಗೆ ಶಾಶ್ವತ ಗೌರವ ಸಲ್ಲಿಸಿದಂತಾಗುತ್ತದೆ ಎಂದಿದ್ದಾರೆ.

ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡುವ ಮೂಲಕ ಬೆಂಗಳೂರನ್ನು 'ಸಿಲಿಕಾನ್ ಸಿಟಿ'ಯಾಗಿ ಬೆಳೆಸುವಲ್ಲಿ ಎಸ್.ಎಂ. ಕೃಷ್ಣ ಅವರ ಕೊಡುಗೆ ಸ್ಮರಣೀಯವಾಗಿದೆ. ತಂತ್ರಜ್ಞಾನ, ಶಿಕ್ಷಣ, ಕೈಗಾರಿಕೆ ಹಾಗೂ ನಗರಾಭಿವೃದ್ಧಿಗೆ ಅವರು ನೀಡಿದ ಆದ್ಯತೆ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಎಸ್.ಎಂ.ಕೃಷ್ಣ ರವರು ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಮೂಲಸೌಕರ್ಯಾಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ನೀಡಿದವರು. ನಗರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ, ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ, ಹೂಡಿಕೆ, ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೆ ಹೊಸದಿಕ್ಕು ನೀಡಿ ಸಿಲಿಕಾನ್ ಸಿಟಿ ಎಂದು ಪ್ರಪಂಚದಾದ್ಯಂತ ಖ್ಯಾತಿ ಪಡೆಯಲು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಅವರು ರಾಷ್ಟ್ರ ರಾಜಕಾರಣದಲ್ಲಿ ಪ್ರವೇಶಿಸಿ ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದಲ್ಲಿ ಭಾರತದ ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟ್ರದ ಸನ್ಮಾನ್ಯ ರಾಜ್ಯಪಾಲರಾಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿ, ರಾಜ್ಯದ ಮತ್ತು ದೇಶದ ಗೌರವವನ್ನು ಹೆಚ್ಚಿಸಿದರು. ಅವರ ಆಡಳಿತಾವಧಿಯಲ್ಲಿ ರಾಜ್ಯದ ಶಕ್ತಿ ಕೇಂದ್ರವನ್ನು ಹೋಲುವಂತೆ 2004ರಲ್ಲಿ ನಿರ್ಮಿಸಲಾದ ವಿಕಾಸ ಸೌಧ ರಾಜ್ಯದ ಆಡಳಿತ ವ್ಯವಸ್ಥೆಗೆ ಮಹತ್ವದ ಕೊಡುಗೆಯಾಗಿದೆ. ಈ ಕಟ್ಟಡದ ನಿರ್ಮಾಣದಲ್ಲಿ ಅವರ ದೂರದೃಷ್ಟಿ ಮತ್ತು ನಾಯಕತ್ವ ಪ್ರಮುಖ ಪಾತ್ರ ವಹಿಸಿತು.
ಇವೆಲ್ಲವುಗಳ ಜೊತೆಗೆ ಕರ್ನಾಟಕದ ಆರ್ಥಿಕ, ಕೈಗಾರಿಕಾ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಗಳಿಗೆ ಶ್ರೀಯುತರು ನೀಡಿದ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿವೆ. ಇಂತಹ ಅಪರೂಪದ ಮಹಾನ್, ನಾಯಕರ ಸೇವೆಯನ್ನು ಮುಂದಿನ ಪೀಳಿಗೆಗಳಿಗೆ ನೆನಪಿಸುವ, ಪರಿಚಹಿಸುವ ಹಾಗೂ ಅವರ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ, ವಿಕಾಸ ಸೌಧದ ಆವರಣದಲ್ಲಿ ಅಥವಾ ಸರ್ಕಾರವು ಸೂಕ್ತವೆಂದು ಪರಿಗಣಿಸುವ ಸ್ಥಳದಲ್ಲಿ ದಿವಂಗತ ಶ್ರೀ ಎಸ್.ಎಂ.ಕೃಷ್ಣ ಅವರ ಪ್ರತಿಮೆಯನ್ನು ಸ್ಥಾಪಿಸಬೇಕಾಗಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ.
ಇದು ಕರ್ನಾಟಕದ ಜನತೆಯ ಕೃತಜ್ಞತೆಯ ಸಂಕೇತವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಆದರ್ಶ ನಾಯಕತ್ವಕ್ಕೆ ಶಾಶ್ವತ ಗೌರವ ಸಲ್ಲಿಸುವ ಕಾರ್ಯವಾಗಲಿದೆ ಎಂಬ ವಿಶ್ವಾಸವಿದೆ. ಸರ್ಕಾರವು ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ನಮ್ರತೆಯಿಂದ ಕೇಳಿಕೊಳ್ಳುತ್ತೇನೆ.
ಎಸ್ ಎಂ ಕೃಷ್ಣ ಅವರು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ರಾಜ್ಯ ಮತ್ತು ದೇಶದ ಗೌರವವನ್ನು ಹೆಚ್ಚಿಸಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ ಸರ್ಕಾರವು ಮನವಿ ಪರಿಗಣಿಸಿ, ಎಸ್.ಎಂ. ಕೃಷ್ಣ ಅವರ ಸ್ಮರಣಾರ್ಥ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


Click it and Unblock the Notifications
