ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗೂ ವಸತಿ ಸೌಲಭ್ಯ: ಗೃಹ ಸಚಿವ
ಚಿಕ್ಕಮಗಳೂರು, ಡಿಸೆಂಬರ್ 19: ರಾಜ್ಯದ ಎಲ್ಲ ಗ್ರಾಮೀಣ ಭಾಗದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ವಸತಿ ನಿರ್ಮಿಸಿ ಕೊಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಭರವಸೆ ನೀಡಿದರು.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಪೊಲೀಸ್ ವಸತಿ ಸಮುಚ್ಛಯವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೊದಲ ಬಾರಿಗೆ ಗೃಹಸಚಿವ ಆದಾಗ ರಾಜ್ಯದ ವಿವಿಧೆಡೆಯ ವಸತಿ ಸಮುಚ್ಛಯಗಳಿಗೆ ಭೇಟಿ ಪರಿಶೀಲಿಸಿದ್ದೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬ್ರಿಟಿಷರ ಕಾಲದ ಮನೆಗಳಲ್ಲಿ ವಾಸಮಾಡುತ್ತಿರುವುದು ಕಂಡು ಬಂದಿತ್ತು. ಅಗತ್ಯ ಸೌಕರ್ಯಗಳಿಲ್ಲದಿರುವುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಪೊಲೀಸ್ ಗೃಹ ಯೋಜನೆಯನ್ನು ಆರಂಭಿಸಲಾಯಿತು.
ಶೇ. 100ರಷ್ಟು ಕೆಲಸದ ಗುರಿ
ರಾಜ್ಯದಲ್ಲಿ ಈವರೆಗೆ ವಸತಿ ಸಮುಚ್ಚಯ ಶೇ 40ರಷ್ಟು ವಸತಿ ನಿರ್ಮಿಸಲಾಗಿದೆ. 100ರಷ್ಟು ಪೂರ್ಣಗೊಳಿಸುವ ಗುರಿ ಸರ್ಕಾರ ಹೊಂದಿದೆ. ಆದ್ಯತೆ ಮೇರೆಗೆ ರಾಜ್ಯದ ಗ್ರಾಮೀಣ ಭಾಗದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ವಸತಿ ನಿರ್ಮಿಸಿಕೊಡುತ್ತೇವೆ ಎಂದು ಅವರು ವಿವರಿಸಿದರು.

ಪೊಲೀಸ್ ಇಲಾಖೆ ಸರ್ಕಾರದ ಒಂದು ಮುಖವಿದ್ದಂತೆ. ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇಲಾಖೆಗೆ ಆಧುನಿಕ ಸ್ಪರ್ಶ ನೀಡಲಾಗುವುದು. ಜನರಿಗಾಗಿ ನಮ್ಮ ಸೇವೆ. ಹೀಗಾಗಿ ಠಾಣೆಯಲ್ಲಿ ಮತ್ತಷ್ಟು ಜನಸ್ನೇಹಿ ವಾತವರಣ ನಿರ್ಮಿಸಬೇಕು ಎಂದು ಸೂಚಿಸಿದರು.
ತರಬೇತಿ ನೀಡಿ ಸಿಬ್ಬಂದಿ ನಿಯೋಜನೆ
ಡಿಜಿಟಲೀಕರಣ ಹಾಗೂ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧ ಹೆಚ್ಚಾಗುತ್ತಿವೆ. ಈಗಾಗಲೇ ರಾಜ್ಯದಲ್ಲಿ 40 ಸೈಬರ್ ಕ್ರೈಂ (CEN) ಠಾಣೆಗಳಿದ್ದು, ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ಇಲಾಖೆಯಲ್ಲಿನ ತಾಂತ್ರಿಕ ಪದವಿಧರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ, ತರಬೇತಿ ನೀಡಿ ಸೈಬರ್ ವಿಭಾಗಕ್ಕೆ ನಿಯೋಜಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಶೇಕಡಾ 20 ರಷ್ಟು ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಸಮರ್ಥವಾಗಿ ಕಾರ್ಯ ನಿರ್ವಹಸುತ್ತಿದ್ದಾರೆ. ಜನರು ಇಲಾಖೆಯಿಂದ ಇನ್ನು ಹೆಚ್ವಿನ ಬದಲಾವಣೆ ಬಯಸುತ್ತಿದ್ದು, ಅವರ ಆಶಯದಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ದತ್ತಪೀಠಕ್ಕೆ ಗೃಹ ಸಚಿವರ ಭೇಟಿ
ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಪ್ರಶಂಸನಾ ಪತ್ರ ವಿತರಿಸಿದರು. ಇದೇ ವೇಳೆ ಚಿಕ್ಕಮಗಳೂರಿನ ದತ್ತಪೀಠಕ್ಕೆ ಭೇಟಿ ನೀಡಿ, ಡಿಸೆಂಬರ್ 25ರಂದು ನಡೆಯುವ ದತ್ತ ಜಯಂತಿ ಹಿನ್ನೆಲೆಯಲ್ಲಿ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಚಿವರು ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ರಾಜೇಗೌಡ, ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ರಾಮಚಂದ್ರ ರಾವ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಜಿಲ್ಲಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications