ವಿಧಾನಮಂಡಲದಲ್ಲಿ ರಾಷ್ಟ್ರಧ್ವಜ ಗಲಾಟೆ: ಕಲಾಪ ಮುಂದೂಡಿಕೆ
ಬೆಂಗಳೂರು, ಫೆ.16: ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ ಸದನದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು ಕೈಯಲ್ಲಿ ರಾಷ್ಟ್ರಧ್ವಜ ಬಳಸಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿ ಸದನವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಆವರು ಈ ತಿಂಗಳ 9 ರಂದು ರಾಷ್ಟ್ರ ಧ್ವಜದ ಬಗ್ಗೆ ನೀಡಿರುವ ಹೇಳಿಕೆ 10ನೇ ತಾರೀಖಿನಂದು ಸುದ್ದಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಸಾರವಾಗಿರುವುದನ್ನು ನಾವೆಲ್ಲಾ ನೋಡಿದ್ದೇವೆ, ಓದಿದ್ದೇವೆ. 2006 ರಿಂದಲೂ ಸಚಿವರಾಗಿದ್ದವರು, ಅನುಭವಿಗಳು, ಹಿರಿಯರು ಆದ ಅವರು ಗೌರವದಿಂದ ಮಾತನಾಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವರು ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಬಗೆಗೆ ಬಹಳ ಅಗೌರವದಿಂದ ಮಾತನಾಡಿದ್ದಾರೆ. ಸಂವಿಧಾನದ ಆರ್ಟಿಕಲ್ 51(1) ರಲ್ಲಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು, ಅವರ ವಿರುದ್ಧ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪ್ರಸ್ತಾವನೆ ಮಂಡಿಸಿತು.
'ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ದೇಶದ್ರೋಹಿ ಈಶ್ವರಪ್ಪ ಅವರನ್ನು ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಸಚಿವರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ರಾಷ್ಟ್ರಧ್ವಜದ ಸಮೇತ ಸದನದ ಬಾವಿಗೆ ಬಂದು ಪ್ರತಿಭಟನೆಗೆ ಇಳಿದರು.

ಇದರಿಂದ ಕೆರಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 'ಕಾಂಗ್ರೆಸ್ ನಾಯಕರು ಸದನದಲ್ಲಿ ಪ್ರತಿಭಟನೆಗಾಗಿ ಈ ರೀತಿ ರಾಷ್ಟ್ರಧ್ವಜ ಬಳಸುತ್ತಿರುವುದು ಗೌರವ ಅಲ್ಲ. ನಿಮ್ಮ ಪಕ್ಷಕ್ಕೆ ಇಷ್ಟು ವರ್ಷದ ಇತಿಹಾಸ ಇದೆ. ಧ್ವಜ ಹೇಗೆ ಬಳಕೆ ಮಾಡಬೇಕು ಎಂಬದು ತಿಳಿದಿಲ್ಲ' ಎಂದು ಕಿಡಿಕಾರಿದರು.
ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ ಇದೆ. ಅದನ್ನು ಎತ್ತಿಹಿಡಿಯಲು ನಾವೆಲ್ಲ ಜವಾಬ್ದಾರರು ಆಗಿರಬೇಕು. ಈ ರೀತಿ ನಿಮ್ಮ ಸ್ವಾರ್ಥಕ್ಕೆ ರಾಷ್ಟ್ರಧ್ವಜ ಬಳಸುವುದು ಸರಿಯಲ್ಲ. ಅದು ನಿಮ್ಮ ಪಕ್ಷದ ಧ್ವಜ ಅಲ್ಲ. ಧರಣಿಗೆ ರಾಷ್ಟ್ರಧ್ವಜ ಬಳಸಬಾರದು. ಸದನದಲ್ಲಿ ಪ್ರತಿಭಟನೆಗೆ ರಾಷಧ್ವಜ ಬಳಸಿದ್ದು ಅಗೌರವ ಉಂಟಾಗಿದೆ. ಹೀಗಾಗಿ ನಿಲುವಳಿ ಸೂಚನೆಗೆ ತಿರಸ್ಕಾರ ಮಾಡಿದ್ದೇನೆ' ಎಂದು ಸ್ಪೀಕರ್ ಕಾಗೇರಿ ರೂಲಿಂಗ್ ನೀಡಿದರು.
ಇದರಿಂದ ಕೆರಳಿದ ಕಾಂಗ್ರೆಸ್ ನಾಯಕರು ಸದನದಲ್ಲಿ ಜೋರಾಗಿ ಘೋಷಣೆಗಳನ್ನು ಕೂಗಿದರು. ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಬೇರೆ ಪ್ರಶ್ನೋತ್ತರ ಕಲಾಪ ನಡೆಯಬಾರದು, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡಬೇಕು, ಅಲ್ಲಿವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಘೋಷಿಸಿದ ಕಾಂಗ್ರೆಸ್ ನಾಯಕರು, ಸ್ಪೀಕರ್ ಆರ್‌ಎಸ್‌ಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮುಂದುವರಿಸಿದರು. ಪರಿಸ್ಥಿತಿ ಕೈ ಮೀರಿದಾಗ ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರು.

ರಾಷ್ಟ್ರಧ್ವಜಕ್ಕೆ ಗೌರವ: ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ನವರು ತಮ್ಮ ರಾಜಕೀಯ ತೆವಲಿಗಾಗಿ ರಾಷ್ಟ್ರಧ್ವಜದ ಉಲ್ಲಂಘನೆ ಮಾಡಿದ್ದಾರೆ. ಜನ ಇದೆಲ್ಲವನ್ನೂ ನೋಡುತ್ತಿದ್ದಾರೆ. ಜಬ್ದಾರಿಯುತವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಅವರು ಸದನದಲ್ಲಿ ನಡೆದುಕೊಳ್ಳುವ ರೀತಿ ಗೌರವ, ಶೋಭೆ ತರುವಂತದ್ದಲ್ಲ. ನೂರು ವರ್ಷದ ಹಳೆಯ ಪಕ್ಷ ದೇಶದಲ್ಲಿ ನೆಲಕಚ್ಚುತ್ತಿದ್ದರೆ ಇಂತಹ ವರ್ತನೆಯೇ ಕಾರಣ ಎಂದರು.
ನಡೆಯುವ ಎಲ್ಲ ಚರ್ಚೆಗೆ ಸದನದಲ್ಲಿ ಚರ್ಚೆ ಮತ್ತು ಉತ್ತರ ಕೊಡಲು ತಯಾರಿದ್ದೇವೆ. ಸದನದ ಇತಿಹಾಸದಲ್ಲಿಯೇ ಈ ರೀತಿ ರಾಷ್ಟ್ರಧ್ವಜ ಹಿಡಿದು ಧರಣಿ ಮಾಡಿದ್ದು ನೋಡಿಲ್ಲ, ಜನರೂ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮೂರು ವರ್ಷ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಗಿಲ್ಲ. ರಾಷ್ಟ್ರಧ್ವಜ ಹಾರಿಸಲು ಹೋದವರ ಮೇಲೆ ಗೋಲಿಬಾರ್ ಮಾಡಿದ್ದಾರೆ. ರಾಷ್ಟ್ರಧ್ವಜ ಹೇಗೆ ಬಳಸಬೇಕು ಎಂಬುದಕ್ಕೆ ನಿಯಮಗಳಿವೆ. ಕಾಂಗ್ರೆಸ್‌ನವರು ಈ ರೀತಿ ಸದನದಲ್ಲಿ ಪ್ರತಿಭಟನೆಗಾಗಿ ರಾಷ್ಟ್ರಧ್ವಜ ಬಳಸಿರುವುದು ನಿಯಮಗಳ ಉಲ್ಲಂಘಟನೆ, ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದೆ, ರಾಜಕಾರಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ರಾಷ್ಟ್ರಧ್ವಜಕ್ಕೆ ನೀಡುವುದನ್ನು ನಾವು ಕಾಂಗ್ರೆಸ್‌ನವರಿಂದ ಕಲಿಯುವ ಅಗತ್ಯವಿಲ್ಲ ಎಂದರು.

ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?
ಸದನ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, 'ರಾಷ್ಟ್ರಧ್ವಜದ ಬಗ್ಗೆ ನಮಗೆ ಗೌರವ ಇದೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಬದಲಿಗೆ ಭಗವಾ ಧ್ವಜ ಈಗಲೇ ಹಾರಿಸುತ್ತೇವೆ ಎಂದು ನಾನು ಹೇಳಿಕೆ ನೀಡಿದ್ದರೆ' ಈಗಲೇ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದಾಗ, 'ಶಿವಮೊಗ್ಗದ ಕಾಲೇಜೊಂದರಲ್ಲಿ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾರಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಖಂಡಿಸಿದೆ. ಗುಜರಾತ್‌ನಿಂದ 50 ಲಕ್ಷ ಕೇಸರಿ ಶಾಲು ತಂದಿದ್ದಾರೆ ಎಂಬ ಹೇಳಿಕೆಯನ್ನೂ ಖಂಡಿಸಿದೆ. ಈ ಸಂದರ್ಭದಲ್ಲಿ ಭಗವಾಧ್ವಜ ಕೆಂಪುಕೋಟೆ ಮೇಲೆ ಹಾರಿಸುತ್ತೀರಾ ಎಂಬ ವಿಚಾರ ಬಂದಾಗ, ಹಿಂದುತ್ವ, ಹಿಂದೂ ವಿಚಾರ ಕರ್ನಾಟಕ ರಾಜ್ಯದಲ್ಲಿ ಚರ್ಚೆಯಲ್ಲಿದೆ. ಭಗವಾಧ್ವಜ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೂ ನೂರು, ಇನ್ನೂರು ಅಥವಾ ಐನೂರು ವರ್ಷದ ಬಳಿಕ ಭಗವಾಧ್ವಜ ಹಾರಬಹುದು, ನನಗೆ ಗೊತ್ತಿಲ್ಲ ಎಂದು ಹೇಳಿದ್ದೆ ಹೊರತು ಈಗಲೇ ಭಗವಾಧ್ವಜ ಹಾರಿಸಬೇಕು ಎಂಬ ಹೇಳಿಕೆಯನ್ನು ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು.












Click it and Unblock the Notifications