ಅತ್ತೆಯನ್ನು ಮದ್ವೆಯಾಗಲು ಹೆಂಡ್ತಿಗೇ ಡಿವೋರ್ಸ್ ನೀಡಿದ ಭೂಪ, ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್
ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ. ಆದರೆ, ಇತ್ತೀಚೆಗೆ ಆರಂಭವಾಗುವ ಹಾಗೂ ಕ್ಷಣ ಮಾತ್ರದಲ್ಲಿಯೇ ಮುಗಿದು ಹೋಗುವ ಪ್ರೀತಿಗೆ ಮನಸ್ಸೇ ಇಲ್ಲವೆನಿಸುತ್ತದೆ. ಉತ್ತರದ ಪ್ರದೇಶದ ಕಾನ್ಪುರದಲ್ಲಿ ಹೆಂಡತಿಯ ಅಮ್ಮನನ್ನೇ ಮದ್ವೆಯಾಗಲು, ಪತ್ನಿಗೆ ಡಿವೋರ್ಸ್ ಕೊಟ್ಟಿದ್ದಾನೆ. ಇತ್ತೀಚೆಗೆ ಇಂಥದ್ದೊಂದು ಘಟನೆ ವರದಿಯಾಗಿತ್ತಾದರೂ, ಈಗ ವರದಿಯಾದ ಹೊಸ ಘಟನೆ ಮತ್ತೊಂದಿಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಪತ್ನಿಗೆ ವಿಚ್ಛೇದನ ನೀಡಿ, ವ್ಯಕ್ತಿಯೊಬ್ಬ ಆಕೆಯ ಅಮ್ಮನನ್ನೇ ಮದ್ವೆಯಾಗಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಿಂದ ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬದಲಾಗುತ್ತಿರುವ ಸಂಬಂಧ, ಮೌಲ್ಯಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಹ ವೈರಲ್ ಆಗುತ್ತಿದ್ದು, ಕಾಲ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಕೆಲ ವರ್ಷಗಳ ಹಿಂದೆಯಷ್ಟೇ ಹಿರಿಯರ ಒಪ್ಪಿಗೆ ಪಡೆದು, ಬಂಧು, ಸ್ನೇಹಿತರ ಉಪಸ್ಥಿತಿಯಲ್ಲಿ ಆತ ಆಕೆಯನ್ನು ವರಿಸಿದ್ದನು. ಎಲ್ಲರ ದಾಂಪತ್ಯ ಜೀವನದಲ್ಲಿ ಇರವಂತೆ ಭಿನ್ನಾಭಿಪ್ರಾಯಗಳು ಇವರಿಬ್ಬರ ನಡುವೆಯೂ ಇತ್ತು. ಬಿರುಕು ಹೆಚ್ಚಾಗುತ್ತಿದ್ದಂತೆ ಪತಿ-ಪತ್ನಿಯ ಸಂಬಂಧ ಹದಗೆಟ್ಟಿತು. ಇದೇ ವೇಳೆ ಆತ ತನ್ನ ಅತ್ತೆಯೊಂದಿಗೆ ಹೆಚ್ಚು ಆತ್ಮೀಯವಾಗಿ ಬೆರೆಯಲು ಆರಂಭಿಸಿದ್ದಾನೆ. ಆ ಆತ್ಮೀಯತೆ ಅದೆಷ್ಟು ಬೆಳೆಯಿತು ಅಂದ್ರೆ, ಇದೀಗ ಪತ್ನಿಗೆ ಡಿವೋರ್ಸ್ ನೀಡಿ, ಪತ್ನಿಯ ಅಮ್ಮನ ಜೊತೆ ಕೋರ್ಟ್ ಮ್ಯಾರೇಜ್ ಆಗಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಇಬ್ಬರೂ ಹಾರ ಹಾಕಿಕೊಂಡು ನಿಂತಿರುವುದು ಹಾಗೂ ಮದುವೆ ದಾಖಲೆ ಪತ್ರವನ್ನು ಪ್ರದರ್ಶಿಸುವುದು ಕಾಣುತ್ತದೆ.
ಈ ವಿಡಿಯೋ ವೈರಲ್ ಆದ ನಂತರ ಸ್ಥಳೀಯ ಜನರಲ್ಲಿ ಹಾಗೂ ನೆಟ್ಟಿಗರಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಕೆಲವರು ಈ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಇವರಿಬ್ಬರ ನಡುವೆ ಎಷ್ಟು ದಿನಗಳಿಂದ ಸಂಬಂಧ ಇತ್ತು ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ಹೇಳಿಕೆಗಳಿಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಈ ವಿಷಯದಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಜನರ ಗಮನ ಸೆಳೆದ ಕಾರಣ ಏನು?
ಸಾಮಾನ್ಯವಾಗಿ ಅತ್ತೆ-ಅಳಿಯನ ಸಂಬಂಧವನ್ನು ಕುಟುಂಬದ ಗೌರವಯುತ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಳಿಯನೇ ಅತ್ತೆಯನ್ನು ಮದುವೆಯಾಗಿರುವುದು ಜನರಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ. ಇದರ ಪರಿಣಾಮವಾಗಿ ಈ ಘಟನೆ ದೇಶಾದ್ಯಂತ ಸುದ್ದಿಯಾಗಿದೆ.
ಕಾನ್ಪುರದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅಳಿಯ ತನ್ನ ಪತ್ನಿಗೆ ವಿಚ್ಛೇದನ ನೀಡಿ ಅತ್ತೆಯನ್ನು ಮದುವೆಯಾಗಿದ್ದಾನೆ ಎಂಬ ವರದಿಗಳು ಹರಿದಾಡುತ್ತಿವೆ. ವಿಡಿಯೋ ವೈರಲ್ ಆದರೂ, ಪ್ರಕರಣದ ಹಲವು ವಿವರಗಳಿಗೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಷ್ಟೆ.














Click it and Unblock the Notifications