ರಾಜ್ಯಸಭೆ ಚುನಾವಣೆ : ಕಾಂಗ್ರೆಸ್ 3ನೇ ಅಭ್ಯರ್ಥಿ ಗೆಲುವು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜೂನ್ 11 : ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ಆರಂಭವಾಗಿದೆ. ಚುನಾವಣೆಯಲ್ಲಿ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಬಿ.ಎಂ.ಫಾರೂಕ್ ಅವರನ್ನು ಗೆಲ್ಲಿಸಲೇಬೇಕು ಎಂಬುದು ಜೆಡಿಎಸ್ ಗುರಿ.

ರಾಜ್ಯಸಭೆ ಚುನಾವಣೆ ಕಾಂಗ್ರೆಸ್‌ನಿಂದ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್ ಕಣದಲ್ಲಿದ್ದಾರೆ. ಶಾಸಕರ ಬಲಾಬಲದ ಆಧಾರದ ಮೇಲೆ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಒಬ್ಬರು ಅಭ್ಯರ್ಥಿ ಗೆಲುವು ಸಾಧಿಸಲು 45 ಮತಗಳ ಅಗತ್ಯವಿದೆ. [ರಾಜ್ಯಸಭೆ ಚುನಾವಣೆ 2016 : ಅಭ್ಯರ್ಥಿಗಳ ಆಸ್ತಿ ವಿವರಗಳು]

kc ramamurthy

ಪಕ್ಷ ಮೂರನೇ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಅವರನ್ನು ಕಣಕ್ಕಿಳಿಸಿದೆ. ಇವರ ಗೆಲುವಿಗೆ 12 ಮತಗಳು ಮಾತ್ರ ಕಡಿಮೆ ಇದೆ. ಪಕ್ಷೇತರರ ಸಹಾಯ ಪಡೆದು ಇವರನ್ನು ಗೆಲ್ಲಿಸಿಕೊಂಡು ಬರುವುದು ಕಾಂಗ್ರೆಸ್‌ನ ತಂತ್ರ. ಜೆಡಿಎಸ್‌ನ ಐವರು ಶಾಸಕರು ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆ ಇದ್ದು, ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]

ಪಕ್ಷಗಳ ಲೆಕ್ಕಾಚಾರ : ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಶಾಸಕರ ಬಲ ಹೊಂದಿದೆ. ಆಸ್ಕರ್ ಫರ್ನಾಂಡೀಸ್ ಮತ್ತು ಜೈರಾಮ್ ರಮೇಶ್ ಅವರಿಗೆ 45 ಮತಗಳು ಹಂಚಿಕೆಯಾದರೆ 90 ಮತಗಳಾಗುತ್ತವೆ. ಉಳಿದ 33 ಮತಗಳು ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಹಂಚಿಕೆಯಾಗುತ್ತದೆ. ಆಗ 12 ಮತಗಳ ಕೊರತೆ ಎದುರಾಗುತ್ತದೆ. [ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ರಿಟರ್ನ್ಸ್, ಕಾಂಗ್ರೆಸ್ ಡೈರೆಕ್ಷನ್]

ಬಿಜೆಪಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಬಲ 44. ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದ್ದು, ಗೆಲುವು ಸಾಧಿಸುವುದು ಕಷ್ಟವಾಗುವುದಿಲ್ಲ.

ಜೆಡಿಎಸ್ ಉದ್ಯಮಿ ಬಿ.ಎಂ.ಫಾರೂಕ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ ಜೆಡಿಎಸ್ 40 ಶಾಸಕರನ್ನು ಹೊಂದಿದೆ. ಫಾರೂಕ್ ಅವರ ಗೆಲುವಿಗೆ 5 ಮತಗಳ ಕೊರತೆ ಇದೆ. ಶಾಸಕ ಜಮೀರ್ ಅಹಮದ್ ಖಾನ್ ಮುಂತಾದವರು ಕಾಂಗ್ರೆಸ್‌ ಬೆಂಬಲಿಸುವ ಸಾಧ್ಯತೆ ಇರುವುದು ಪಕ್ಷಕ್ಕೆ ತಲೆನೋವಾಗಿದೆ. ಶನಿವಾರ ಸಂಜೆಯೇ ಫಲಿತಾಂಶ ಪ್ರಕಟಗೊಳ್ಳಲಿದೆ. ಯಾರಿಗೆ ಗೆಲುವು? ಎಂದು ಕಾದು ನೋಡಬೇಕು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the polls to the Rajya Sabha in Karnataka get underway, the Congress appears to be confident that its three candidates would win. The Congress has nominated Oscar Fernandes, Jayram Ramesh and K C Ramamurthy.
Please Wait while comments are loading...