ಕಡಿಮೆಯಾಗುತ್ತಿಲ್ಲ ತರಕಾರಿ ಬೆಲೆ: ಕಳೆದ ವಾರಕ್ಕೆ ಹೋಲಿಸಿದರೆ ಮತ್ತಷ್ಟು ಹೆಚ್ಚಳ!
ಬೆಂಗಳೂರು, ಜುಲೈ 3: ದೇಶಾದ್ಯಂತ ವಿವಿಧ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಕೆಲವು ತರಕಾರಿಗಳ ಬೆಲೆ ಇನ್ನಷ್ಟು ಹೆಚ್ಚಾಗಿದೆ. ಟೊಮ್ಯಾಟೋ ದರ 100 ರ ಆಸುಪಾಸಿನಲ್ಲಿದೆ.
ತರಕಾರಿ ಬೆಲೆ ಹೆಚ್ಚಳ ಜನರ ಜೇಬಿಗೆ ಕತ್ತರಿ ಹಾಕಿದೆ. ಬಿರು ಬೇಸಿಗೆ, ಅಕಾಲಿಕ ಮಳೆಯ ನಡುವೆಯೂ ಕಷ್ಟ ಪಟ್ಟು ಬೆಳೆದ ರೈತರು ಲಾಭದ ಮುಖ ನೋಡುವ ವಿಶ್ವಾಸದಲ್ಲಿದ್ದರೆ, ಗ್ರಾಹಕರು ಮಾತ್ರ ತರಕಾರಿ ಬೆಲೆ ಕಂಡು ಹೌಹಾರಿದ್ದಾರೆ. ಈಗಾದ್ರೆ ಜೀವನ ಹೆಂಗೆ ನಡೆಸೋದು ಸ್ವಾಮಿ ಎಂದುಕೊಳ್ಳುತ್ತಲೇ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ.

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಟೊಮ್ಯಾಟೋ ದರ ಹೆಚ್ಚು ಕಡಿಮೆಯಾಗುತ್ತಲೇ ಇದೆ. ಕಳೆದ ವಾರ 120 ರೂಪಾಯಿ ಇದ್ದರೆ, ಈ ವಾರ ಕೂಡ 110-120 ರೂಪಾಯಿ ಆಸುಪಾಸಿನಲ್ಲಿದೆ. ಹಸಿರು ಮೆಣಸಿನಕಾಯಿ ದರ ಮಾತ್ರ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ 20 ರೂಪಾಯಿ ಕಡಿಮೆಯಾಗಿದೆ. ಕಳೆದ ವಾರ ಒಂದು ಕೆ.ಜಿ ಮೆಣಸಿನಕಾಯಿ ದರ 100 ರೂಪಾಯಿ ಇದ್ದರೆ ಈ ವಾರ 80 ರೂಪಾಯಿಗೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ವಿವಿಧ ತರಕಾರಿಗಳ ಬೆಲೆಗಳು
ಕಳೆದ ವಾರ ಎಲೆಕೋಸು ಒಂದು ಕೆ.ಜಿ.ಗೆ 20-25 ರೂಪಾಯಿ ಇದ್ದರೆ ಈ ವಾರ 30-40 ರೂಪಾಯಿಗೆ ಹೆಚ್ಚಾಗಿದೆ. ಬದನೆಕಾಯಿ ದರ ಕಳೆದ ವಾರ 25-30 ರೂಪಾಯಿ ಇದ್ದರೆ ಸದ್ಯ 35-45 ರೂಪಾಯಿ ಆಗಿದೆ. ಆಲೂಗಡ್ಡೆ ಪ್ರತಿ ಕೆಜಿಗೆ 35-40 ರೂಪಾಯಿಗೆ ಮಾರಾಟವಾಗುತ್ತಿದೆ.
ಕ್ಯಾರೆಟ್ ದರ ಮತ್ತಷ್ಟು ಹೆಚ್ಚಾಗಿದ್ದು ಕಳೆದ ವಾರ 80-85 ರೂಪಾಯಿ ಇದ್ದರೆ ಈ ವಾರ 90-100 ರೂಪಾಯಿಗೆ ಹೆಚ್ಚಳವಾಗಿದೆ. ಬೆಂಡೆಕಾಯಿ ಪ್ರತಿ ಕೆ.ಜಿ.ಗೆ 35-45 ರೂಪಾಯಿ ಇದ್ದರೆ, ಕ್ಯಾಪ್ಸಿಕಂ ಬೆಲೆ 75-80 ರೂಪಾಯಿಗಳಷ್ಟಿದೆ. ಸೌತೆಕಾಯಿ ಕೂಡ ದುಬಾರಿಯಾಗಿದ್ದು ಪ್ರತಿ ಕೆ.ಜಿ. ಗೆ 50-60 ರೂಪಾಯಿಗೆ ಏರಿಕೆಯಾಗಿದೆ.
ಹೂಕೋಸು ಒಂದಕ್ಕೆ 35-40 ರೂಪಾಯಿ. ಬೀನ್ಸ್ (ಹುರುಳಿಕಾಯಿ) ಪ್ರತಿ ಕೆ.ಜಿ ಗೆ 140 ರೂಪಾಯಿ ಇದೆ. ಶುಂಠಿ ದರ ಕೂಡ ಏರಿಕೆಯಾಗಿದ್ದು ಒಂದು ಕೆಜಿ ಶುಂಠಿ ದರ ಸದ್ಯ 250-300 ರೂಪಾಯಿಗಳಷ್ಟಿದೆ. ಬೀಟ್‌ರೋಟ್ ಒಂದು ಕೆ.ಜಿ.ಗೆ 65-70 ರೂಪಾಯಿಯಂತೆ ಮಾರಾಟವಾಗುತ್ತಿದೆ. ಈರೇಕಾಯಿ ಪ್ರತಿ ಕೆ.ಜಿ.ಗೆ 60-65 ರೂಪಾಯಿಗಳಿಷ್ಟಿದೆ. ಮೂಲಂಗಿ ಒಂದು ಕೆ.ಜಿ. ಗೆ 35-40 ರೂಪಾಯಿಯಷ್ಟಾಗಿದೆ. ಸಿಹಿಗೆಣಸು ಸದ್ಯ ಒಂದು ಕೆ.ಜಿ. 50-55 ರೂಪಾಯಿಗಳಷ್ಟಾಗಿದೆ.
ಸೊಪ್ಪಿನ ಬೆಲೆ ಕೂಡ ಏರಿಕೆ
ಕೊತ್ತಮರಿ ಸೊಪ್ಪು - 110 ರೂಪಾಯಿ ಕೆ.ಜಿ.
ಮೆಂತ್ಯ ಸೊಪ್ಪು - 100 ರೂಪಾಯಿ ಕೆ.ಜಿ.
ಪಾಲಕ್ ಸೊಪ್ಪು - 80 ರೂಪಾಯಿ ಕೆ.ಜಿ.
ದಂಟು- 80 ರೂಪಾಯಿ ಕೆ.ಜಿ.
ಬಸಳೆ ಸೊಪ್ಪು- 75 ರೂಪಾಯಿ ಕೆ.ಜಿ.
ಪುದೀನಾ - 60 ರೂಪಾಯಿ ಕೆ.ಜಿ.
ಟೊಮೆಟೋ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಕಾಲಿಕ ಮಳೆ, ಅಧಿಕ ಉಷ್ಣತೆ, ಬೆಳೆಗಳಿಗೆ ಕಾಡುತ್ತಿರುವ ರೋಗಗಳು, ಕಡಿಮೆಯಾದ ಇಳುವರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಮೊಟ್ಟೆ, ಮಾಂಸ ಕೂಡ ದುಬಾರಿಯಾಗಿದ್ದು ಜನ ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಕೊಳ್ಳುತ್ತಿದ್ದಾರೆ. ಒಂದು ಮೊಟ್ಟೆ ದರ 6-7 ರೂಪಾಯಿ ಇದ್ದು, ಕೋಳಿ ಮಾಂಸ 250-300 ರೂಪಾಯಿಯಷ್ಟಿದೆ, ಮೇಕೆ, ಕುರಿ ಮಾಂಸದ ಬೆಲೆ 800 ರೂಪಾಯಿ ದಾಟಿದೆ.












Click it and Unblock the Notifications