ನಿವೃತ್ತ ಕೆ.ಎ.ಎಸ್. ಅಧಿಕಾರಿ ಆರ್. ರುದ್ರಯ್ಯ ಬಿಜೆಪಿ ಸೇರ್ಪಡೆ: ಮಾಜಿ ಸಿಎಂ ಹೇಳಿದ್ದೇನು?
ಬೆಂಗಳೂರು, ಜನವರಿ 24: ವಿಧಾನಸಭಾ ಚುಣಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ರುಚಿ ತೋರಿಸಲು ಕಮಲ-ದಳ ನಾಯಕರು ಮೈತ್ರಿಯಾಗಿದ್ದು, ನಿವೃತ್ತ ಐ ಎ ಎಸ್ ಹಾಗೂ ಕೆ ಎ ಎಸ್ ಅಧಿಕಾರಿಗಳಿಗೆ ಬಿಜೆಪಿ ಗಾಳ ಹಾಕಿದೆ.
ಇಂದು(ಬುಧವಾರ) ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಮ್ಮುಖದಲ್ಲಿ ನಿವೃತ್ತ ಕೆ.ಎ.ಎಸ್. ಅಧಿಕಾರಿ ಆರ್. ರುದ್ರಯ್ಯ ಅವರನ್ನ ಪಕ್ಷ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ದೇಶಾದ್ಯಂತ ಇವತ್ತು ನರೇಂದ್ರ ಮೋದಿಜೀ, ಬಿಜೆಪಿ ಮತ್ತು ಕಮಲ ಚಿಹ್ನೆ ಪರವಾದ ಅಲೆ ಇದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಡೀ ದೇಶ ಇವತ್ತು ಅತ್ಯಂತ ಭರವಸೆಯಿಂದ ನರೇಂದ್ರ ಮೋದಿಜೀ ಅವರ ನಾಯಕತ್ವದ ಬಿಜೆಪಿ ಕಡೆ ನೋಡುತ್ತಿದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,
ಕರ್ನಾಟಕದಲ್ಲಿ 25 ಲೋಕಸಭಾ ಸೀಟು ಬಂದಿತ್ತು. ಅದನ್ನು ಮೀರಿ ಅದಕ್ಕಿಂತ ಹೆಚ್ಚು ಸೀಟುಗಳನ್ನು ಪಕ್ಷ ಗೆಲ್ಲಲಿದೆ ಎಂದರು. ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲೂ ಅತಿ ಹೆಚ್ಚು ಸೀಟು ಸಿಗಲಿದ್ದು, ಅಚ್ಚರಿಯ ಫಲಿತಾಂಶ ಲಭಿಸಲಿದೆ ಎಂದು ತಿಳಿಸಿದರು.
ಇದರ ಪ್ರಭಾವ ಕರ್ನಾಟಕದಲ್ಲೂ ಆಗಿದೆ. ಎಸ್‍ಸಿ, ಎಸ್‍ಟಿ ಸೇರಿದಂತೆ ಕಾಂಗ್ರೆಸ್ ಮತಬ್ಯಾಂಕಿನಂತಿದ್ದ ಎಲ್ಲ ಸಮುದಾಯಗಳು ಭ್ರಮನಿರಸನಗೊಂಡಿವೆ. ದಲಿತರ ಅಭಿವೃದ್ಧಿಗಾಗಿ ಕೊಟ್ಟಿದ್ದ ಸುಮಾರು 11,300 ಕೋಟಿ ಹಣವನ್ನು ಗ್ಯಾರಂಟಿ ಸ್ಕೀಮಿಗೆ ಕೊಟ್ಟರಲ್ಲವೇ? ಆ ಮೂಲಕ ದಲಿತರನ್ನು ವಂಚಿತರನ್ನಾಗಿ ಮಾಡಿದ್ದೀರಲ್ಲವೇ ಎಂದು ಕೇಳಿದರು. ರುದ್ರಯ್ಯ ದಕ್ಷ ಅಧಿಕಾರಿಯಾಗಿ ಸೇವೆ ಮಾಡಿದವರು. ಜನಪ್ರೀತಿ ಪಡೆದವರು ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಜೆಪಿ ಮಾಡಿದ ಸಾಧನೆ, ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಿಳಿಸಬೇಕು. ಆಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದು ತಿಳಿಸಿದರು. ಡಾ.ಅಂಬೇಡ್ಕರರನ್ನು ಕಾಂಗ್ರೆಸ್ ಸೋಲಿಸಿದ್ದು, ಅವರ ಪಾರ್ಥಿವ ಶರೀರಕ್ಕೆ ದೆಹಲಿಯಲ್ಲಿ ಜಾಗ ಕೊಡದ ಕುರಿತು ಜನರಿಗೆ ತಿಳಿಸಬೇಕು. ಅಂಬೇಡ್ಕರರನ್ನು ಅವಮಾನ ಮಾಡಿದವರಿಗೆ ಗೌರವ ಕೊಟ್ಟದ್ದನ್ನು ತಿಳಿಸಬೇಕು. ಪಂಚಕ್ಷೇತ್ರ ಅಭಿವೃದ್ಧಿ, ಭಾರತರತ್ನ ನೀಡಿದ್ದನ್ನು ನೆನಪಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕುಟುಂಬವನ್ನೇ ನೆಚ್ಚಿಕೊಂಡ ಪಕ್ಷ. ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ಪಕ್ಷ. ಕಾಂಗ್ರೆಸ್ಸಿಗೆ ಧಿಕ್ಕಾರ ಹಾಕಿದರೆ, ಆ ಪಕ್ಷದವರಿಗೆ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ನಮ್ಮ ಬೆಳವಣಿಗೆ ಆಗುತ್ತದೆ ಎಂದು ನುಡಿದರು.
ಸಂಸದ ಎಸ್.ಮುನಿಸ್ವಾಮಿ, ರಾಯಚೂರು ಜಿಲ್ಲಾ ಅಧ್ಯಕ್ಷ ಸುರೇಶ್ ಪಾಟೀಲ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿದರು. ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ಸ್ವಾಗತ ಕೋರಿದರು.












Click it and Unblock the Notifications