ಬಿಜೆಪಿ ಸೇರಲಿದ್ದಾರೆ ನಿವೃತ್ತ ಕೆಎಎಸ್ ಅಧಿಕಾರಿ?
1998ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈಗಾಗಲೇ ಸರ್ಕಾರಿ ಕೆಲಸಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು, ಮಾರ್ಚ್ 13; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೇರೆ-ಬೇರೆ ಪಕ್ಷ ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು ರಾಜಕೀಯ ಪಕ್ಷ ಸೇರುತ್ತಿದ್ದು, ಈ ಬಾರಿಯ ಚುನಾವಣಾ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ನಿವೃತ್ತ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕರ್ನಾಟಕದಲ್ಲಿ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ನಾಗರಾಜ್ ಹೆಸರು ಕೇಳಿ ಬಂದಿತ್ತು. ಐಎಂಎಎ ಪರವಾಗಿ ವರದಿ ನೀಡಲು 4.5 ಕೋಟಿ ರೂ. ಲಂಚ ಸ್ವೀಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಐಎಂಎ ಹಗರಣದ ತನಿಖೆ ನಡೆಸುತ್ತಿದ್ದಾಗ ಎಲ್. ಸಿ. ನಾಗರಾಜ್ ಬಂಧನವೂ ಆಗಿತ್ತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. ಅಮಾನತ್ತಿನಲ್ಲಿದ್ದ ಅವರು ವೈಯಕ್ತಿಕ ಕಾರಣದಿಂದ ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಮಾರ್ಚ್ 9ರಂದು ರಾಜೀನಾಮೆ ನೀಡಿದ್ದರು. ಸರ್ಕಾರ ರಾಜೀನಾಮೆಯನ್ನು ಅಂಗೀಕರಿಸಿದೆ. ಈಗ ಅವರು ಬಿಜೆಪಿ ಸೇರಲು ಬಯಸಿದ್ದಾರೆ ಎಂಬ ಮಾಹಿತಿ ಇದೆ.
1998ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ ಎಲ್. ಸಿ. ನಾಗರಾಜ್ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಐಎಂಎ ಪರವಾಗಿ ವರದಿ ನೀಡಲು ಮೂರು ಕಂತುಗಳಲ್ಲಿ 4.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬುದು ಆರೋಪವಾಗಿದೆ. ಲಂಚ ಪ್ರಕರಣ ಬೆಳಕಿಗೆ ಬಂದಾಗ ಅವರನ್ನು ಬಂಧಿಸಲಾಗಿತ್ತು. ನೆಲಮಂಗಲದ ಪರಮಣ್ಣ ಬಡಾವಣೆಯಲ್ಲಿರುವ ಅವರ ನಿವಾಸದ ಮೇಲೆ ಎಸಿಬಿ ದಾಳಿಯೂ ನಡೆದಿತ್ತು.

ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿದ್ದ ಎಲ್. ಸಿ. ನಾಗರಾಜ್, "ಹಿರಿಯ ಅಧಿಕಾರಿಗಳು ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಸಿದ್ದಾರೆ. ನಾನು ಪ್ರಮಾಣಿಕವಾಗಿಯೇ ಇದ್ದಾನೆ. ನನ್ನ ಮೇಲೆ ಪದೇ ಪದೇ ದಾಳಿ ಮಾಡಿಸಲಾಗುತ್ತಿದೆ. ನಮ್ಮ ಮನೆಯಲ್ಲಿ ಸಿಕ್ಕ ಹಣಕ್ಕೆ ದಾಖಲೆಗಳಿವೆ. ನನ್ನ ಪತ್ನಿಗೆ ಸಂಬಂಧಿಸಿದ ಆಸ್ತಿಯನ್ನು 2.4 ಕೋಟಿ ರೂ.ಗಳಿಗೆ ಮಾರಾಟ ಮಾರಾಟ ಮಾಡಿದ್ದೇನೆ, ಅದರ ಹಣ ಮನೆಯಲ್ಲಿ ಇತ್ತು" ಎಂದು ಹೇಳಿದ್ದರು.
2021ರಲ್ಲಿ ಎಲ್. ಸಿ. ನಾಗರಾಜ್ ಪತ್ನಿ ನಾಗರತ್ನಮ್ಮ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಒಟ್ಟು ಮೂರು ಬಾರಿ ನಾಗರಾಜ್ ಮನೆ ಮೇಲೆ ದಾಳಿ ಮಾಡಲಾಗಿತ್ತು, ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು. ಪದೇ ಪದೇ ನನ್ನನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಈ ದಾಳಿಗಳಿಗೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ನಾಗರಾಜ್ ಹೇಳಿಕೆ ನೀಡಿದ್ದರು.
ರಾಜೀನಾಮೆ ಅಂಗೀಕಾರಕ್ಕೆ ಷರತ್ತು; ಎಲ್. ಸಿ. ನಾಗರಾಜ್ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿಯಾಗಿದ್ದರು. ಷರತ್ತಿನ ಆಧಾರದ ಮೇಲೆ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿದೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಅಮಾನತ್ತಿನಲ್ಲಿದ್ದ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು.
ರಾಜೀನಾಮೆ ಅಂಗೀಕಾರ ಮಾಡುವಾಗ ಅವರ ವಿರುದ್ಧ ಹೂಡಲು ಪ್ರಸ್ತಾಪಿಸಲಾಗಿರುವ, ಪರಿಶೀಲನೆಯಲ್ಲಿರುವ ಮತ್ತು ಈಗಾಗಲೇ ಹೂಡಲಾಗಿರುವ ತನಿಖಾ ಹಂತದಲ್ಲಿರುವ ಶಿಸ್ತು ಕ್ರಮ ಪ್ರಕರಣಗಳು, ಇಲಾಖಾ ವಿಚಾರಣೆ ಕ್ರಮಗಳು, ಜಂಟಿ ಇಲಾಖಾ ವಿಚಾರಣೆ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು, ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರೆಸುವ ಹಾಗೂ ಭವಿಷ್ಯದಲ್ಲಿ ಸಹ ಇವರ ವಿರುದ್ಧ ಯಾವುದೇ ಇಲಾಖೆಯಲ್ಲಿ ಶಿಸ್ತು ಕ್ರಮ ಪ್ರಕರಣಗಳನ್ನು/ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟು ರಾಜೀನಾಮೆ ಅಂಗೀಕಾರ ಮಾಡಲಾಗಿದೆ.












Click it and Unblock the Notifications