Government Employees: ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವ ನಿರ್ಣಯ
ಬೆಂಗಳೂರು, ಮಾರ್ಚ್ 27: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯನ್ನು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.
ಇಂದು(ಮಾರ್ಚ್27, ಗುರುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಆಚರಣೆ ಮಾಡಲು ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸಿದ್ದ ಮೇರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ವಿಕಾಸಸೌಧದ ಮುಂದಿನ ಖಾಲಿ 29.85 ಗುಂಟೆ ಜಾಗದಲ್ಲಿ 87 ಕೋಟಿ ವೆಚ್ಚದಲ್ಲಿ ಸ್ಪೂರ್ತಿಸೌಧ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳನ್ನು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ವಿಶೇಷ ಒತ್ತು ಕೊಟ್ಟು ನಿರ್ವಹಣೆ ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಸಚಿವ ಸಂಪುಟ ಅನುಮೋದಿಸಿದೆ. ಕುಡಿಯುವ ನೀರಿಗೆ ಆಗುವ ಸಮಸ್ಯೆಗಳ ಕುರಿತಂತೆ ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ನಿರ್ವಹಣೆ ಮಾಡಲು ಸಮಿತಿಯು ವಿವರಗಳನ್ನು ಪರಿಶೀಲಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ವಿಪತ್ತು ಉಪಶಮನ ನಿಧಿಯಡಿ 194.80 ಕೋಟಿ ಮೊತ್ತದ 330 ಉಪಶಮನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಾಗಿದೆ. ವಿಜಯಪುರ ಜಿಲ್ಲೆಯಲ್ಲಿ ವಿಯಜಪುರ ನಗರಕ್ಕೆ ಆಲಮಟ್ಟಿಯಿಂದ ಪಿಎಸ್‌ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ 50.13 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ಅಂಬೇಡ್ಕರ್ ಭವನ ಬಾಕಿ ಕಾಮಗಾರಿಗಳ ರೂ.23.83 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನ ಡಾ. ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿಗಳ ರೂ.23.83 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ನಿರ್ಧರಿಸಿದೆ. 1994 ರಲ್ಲಿ ಮಂಜೂರಾಗಿದ್ದ ಅಂಬೇಡ್ಕರ್ ಭವನ ಮುಕ್ತಾಯಗೊಳಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟಾರೆ 40 ಕೋಟಿ ರೂ.ಗಳವರೆಗೆ ವೆಚ್ಚವಾಗಿದೆ. ಸರ್ಕಾರಗಳ ಬದಲಾವಣೆಯಾದಂತೆ ಯೋಜನೆಗೆ ಹೆಚ್ಚುವರಿ ಭಾಗಗಳನ್ನು ಸೇರಿಸುತ್ತಾ ಬಂದವೇ ಹೋರತು ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಈಗ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ: ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಗದಗಿನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ. ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ರವರು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಸಹಕಾರಿ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೀ ಕೆ.ಎಚ್. ಪಾಟೀಲರು ರಾಜ್ಯದಲ್ಲಿ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ ನಾಯಕನ ಹೆಸರನ್ನು ಸಾರ್ವಜನಿಕ ಸೇವೆ ಮಾಡುತ್ತಿರುವ ಗದಗ ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಚಿವರು ವಿವರಿಸಿದರು.












Click it and Unblock the Notifications