ವಸತಿ ಶಾಲೆಗಳೂ ಆರ್‌ಟಿಇ ಕಾಯಿದೆ ವ್ಯಾಪ್ತಿಗೆ: ಹೈಕೋರ್ಟ್
ಬೆಂಗಳೂರು, ಜೂನ್ 02: ವಸತಿ ಶಾಲೆಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಐ) 2009 ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಹಾಗಾಗಿ ಇನ್ನು ಮುಂದೆ ವಸತಿ ಶಾಲೆಗಳು ನಮಗೆ ಆರ್‌ಟಿಇ ಅನ್ವಯವಾಗುವುದಿಲ್ಲವೆಂದು ನೆಪ ಹೇಳಿ ತಪ್ಪಿಸಿಕೊಳ್ಳಲಾಗದು. ಅವು ಆರ್‌ಟಿಇ ನಿಯಮಗಳನ್ನು ಪಾಲನೆ ಮಾಡಲೇಬೇಕಾಗಿದೆ.
ಇಲ್ಲವಾದರೆ ದಂಡ ಕಟ್ಟಬೇಕಾಗುತ್ತದೆ. ಏಕೆಂದರೆ ಮೈಸೂರಿನ ಶಾಲೆಯ ಪ್ರಕರಣದಲ್ಲಿ ಸರ್ಕಾರ ವಿಧಿಸಿದ್ದ ಕೋಟ್ಯಂತರ ರೂಪಾಯಿ ದಂಡವನ್ನು ಪಾವತಿಸಲೇಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.

ಸರಕಾರದಿಂದ ಯಾವುದೇ ಅನುದಾನವಿಲ್ಲದೆ ಐಸಿಎಸ್‌ಇ ಶಾಲೆ ನಡೆಸುತ್ತಿರುವ ಮೈಸೂರಿನ ಜ್ಞಾನ ಸರೋವರ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.
ಆರ್‌ಟಿಇ ಕಾಯಿದೆಯಲ್ಲಿನ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು 2021ರ ನ.23ರಂದು 1.61 ಕೋಟಿ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನೋಂದಣಿ ಮಾಡದ್ದಕ್ಕೆ ದಂಡ: ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆರ್‌ಟಿಇ ಕಾಯಿದೆಯ ಸೆಕ್ಷನ್ 18(1) ಅನ್ನು ಉಲ್ಲೇಖಿಸಿ, ಕಾಯಿದೆಯ ಗೆಜೆಟ್ 2012ರ ಏ.28ರಂದು ಆಗಿದೆ. ಆದಾದ ನಂತರ ಆರು ತಿಂಗಳಲ್ಲಿ ಶಾಲೆಯನ್ನು ನೋಂದಣಿ ಮಾಡಿ ಮಾನ್ಯತೆ ಪಡೆಯಬೇಕಿತ್ತು.
ಆದರೆ ಪಡೆದಿಲ್ಲ, ಆ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ. ಅರ್ಜಿದಾರರಿಗೆ ಕಾಯಿದೆಯ ಬಗ್ಗೆ ಅನಗತ್ಯವಾಗಿ ವಿಳಂಬ ಮಾಡಿದ್ದಾರೆ. ಹಾಗಾಗಿ ಇಲಾಖೆ ದಂಡ ವಿಧಿಸಿ ಕೈಗೊಂಡಿರುವ ಕ್ರಮ ಸರಿಯಾಗಿದೆಯೇ ಇದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಡಿ.ಬಾಲಕೃಷ್ಣಪ್ಪ ಮತ್ತು ವಿಲಿಯಂ ಯೇಸುದಾಸ್ ಎನ್ನುವವರು ಶಾಲೆ ಆರ್‌ಟಿಇ ಅಡಿ ಮಾನ್ಯತೆಯನ್ನು ಪಡೆದಿಲ್ಲ, ಹಾಗಾಗಿ ಅದರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೋರಿದ್ದರು.
ಅಧಿಕಾರಿಗಳು ಮೊದಲಿಗೆ 2016ರ ಡಿ.19ಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿತ್ತು. ಆದರೂ ಅವರು ಹಾಜರಾಗಲಿಲ್ಲ. ಆನಂತರ 2017ರ ಜ.12ಕ್ಕೆ ಶಿಕ್ಷಣ ಇಲಾಖೆ ಮತ್ತೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು, ಅದಕ್ಕೆ ಉತ್ತರಿಸಿದ್ದ ಶಾಲೆ ತಮ್ಮದು ವಸತಿ ಶಾಲೆ, ಅದು ಆರ್‌ಟಿಇ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲಎಂದು ಆಕ್ಷೇಪ ಎತ್ತಿದ್ದರು.
ಆನಂತರ ಬಿಇಒ, 2017ರಲ್ಲಿ ಮತ್ತೊಂದು ನೋಟಿಸ್ ಜಾರಿಗೊಳಿಸಿ, ಡಿಡಿಪಿಐ ಆದೇಶದಂತೆ ಆರ್‌ಟಿಇ ಕಾಯಿದೆಯಡಿ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದರು.
ಆನಂತರ ಜಿಲ್ಲಾಪಂಚಾಯಿತಿ ಸಿಇಒ, ಡಿಡಿಪಿಐಗೆ ಆರ್‌ಟಿಇ ಕಾಯಿದೆ ಸೆಕ್ಷನ್ 18 ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಆನಂತರವೂ ಶೋಕಾಸ್ ನೋಟಿಸ್ ನೀಡಿ, ನಿಯಮ ಉಲ್ಲಂಘಿಸಿರುವುದಕ್ಕೆ ನಿಮಗೆ ದಂಡ ವಿಧಿಸಬಾರದೇಕೆ? ಎಂದು ಕೇಳಿದ್ದರು.
ಶಾಲೆಯ ಅಧಿಕೃತ ಪ್ರತಿನಿಧಿಯೊಬ್ಬರು ಡಿಡಿಪಿಐ ಮುಂದೆ ಹಾಜರಾಗಿದ್ದರು. ಆನಂತರ ಡಿಡಿಪಿಐ 1,60,50,000 ಕೋಟಿ ರೂ. ದಂಡ ವಿಧಿಸಿದ್ದರು. ಅದನ್ನು ಪ್ರಶ್ನಿಸಿ ಶಾಲೆಯ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು.












Click it and Unblock the Notifications