ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಯಾರಿಗೆ ಎಷ್ಟು ಮೀಸಲಾತಿ?, ಸುತ್ತೋಲೆ
ಬೆಂಗಳೂರು, ಮೇ 08: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಳು ಆರಂಭವಾಗಿವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ಇದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ 826 ಮೊರಾರ್ಜಿ ದೆಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಡಾ. ಬಿ. ಆರ್. ಅಂಬೇಡ್ಕರ್/ ಅಟಲ್ ಬಿಹಾರಿ ವಾಜಪೇಯಿ/ ಶ್ರೀಮತಿ ಇಂದಿರಾಗಾಂಧಿ/ ಏಕಲವ್ಯ ಮಾದರಿ ವಸತಿ ಶಾಲೆ/ ಕಾಲೇಜುಗಳ ಪೈಕಿ 807 ವಸತಿ ಶಾಲೆಗಳಲ್ಲಿ ಶೇ 25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು/ ಎಚ್ಐವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳುಗಳಿಗೆ ಶೇ 10 ಮೀಸಲಾತಿಯನ್ನು ನಿಗದಿ ಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಸುಮಿತ್ರ ಸರ್ಕಾರದ ಉಪ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾವಕಾಶವನ್ನು ನೀಡಲು ಮೀಸಲಾಯಿತಿಯನ್ನು ಪರಿಷ್ಕರಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಮೀಸಲಾತಿ ವಿವರಗಳು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 800 ವಸತಿ ಶಾಲೆಗಳಿಗೆ 6ನೇ ತರಗತಿಗೆ ಲಭ್ಯವಾಗುವ ಸೀಟುಗಳಿಗೆ ಅನುಗುಣವಾಗಿ ಪ್ರವೇಶ ಕಲ್ಪಿಸಲು ನಿಬಂಧನೆ, ಷರತ್ತು ಮತ್ತು ಮಾರ್ಗಸೂಚಿಗಳಿಗೆ ಅನುಮೋದನ ನೀಡಿ ಆದೇಶಿಸಲಾಗಿದೆ. ಸದರಿ ಆದೇಶಕ್ಕೆ ದಿನಾಂಕ 12/11/2021ರಂದು ನಿಬಂಧನೆ/ ಷರತ್ತು/ ಮಾರ್ಗಸೂಚಿಗಳ ಅಂಶ 9 ಮತ್ತು 10 ಕ್ಕೆ ತಿದ್ದುಪಡಿ ಮಾಡಿ ಆದೇಶಿಸಲಾಗಿದೆ.
2022-23ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಮೀಸಲಾತಿ ನಿಗದಿಪಡಿಸಿರುವಷ್ಟು ಭರ್ತಿಯಾಗದೆ ಖಾಲಿ ಉಳಿದಿರುವ ಸೀಟುಗಳಿಗೆ ಜಿಲ್ಲಾ ಮತ್ತು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಸ್ಥಳೀಯವಾಗಿ ಅರ್ಜಿ ಆಹ್ವಾನಿಸಿ ವಸತಿ ಶಾಲಾ ಮಟ್ಟದಲ್ಲಿ ಆಯಾ ಪ್ರಾಂಶುಪಾಲರುಗಳಿಂದ ಪ್ರವೇಶ ಪರೀಕ್ಷೆ ನಡೆಸಿ ಸಫಾಯಿ ಕರ್ಮಚಾರಿಗಳ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
15/3/2024ರ ಆದೇಶದ ಅನ್ವಯ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದಂತೆ ಹಿಂದಿನ ಆದೇಶಗಳ ಮೀಸಲಾತಿಯನ್ನು ಪರಿಶೀಲಿಸಿ, ವಿಶೇಷ ವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ಪರಿಷ್ಕರಿಸಲು ನಿರ್ಧರಿಸಿ 6ನೇ ತರಗತಿಗೆ ಪ್ರವೇಶ ನೀಡಲು ಅನುಮೋದನೆ ನೀಡಲಾಗಿದೆ.
ಸಫಾಯಿ ಕರ್ಮಚಾರಿ/ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ ಚಿಂದಿ ಆಯುವವರು/ ಸ್ಮಶಾನ ಕಾರ್ಮಿಕರ ಮಕ್ಕಳು ಶೇ 10. ಬಾಲ ಕಾರ್ಮಿಕರು/ ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು ಶೇ 10.
ಶೇ 25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು/ ಎಚ್ಐವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವ ಅನಾಥ ಮಕ್ಕಳು ಶೇ 10. ಗುರುತಿಸಿರುವ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ ಅತಿ ಸೂಕ್ಷ್ಮ ಸಮುದಾಯದ/ ಸೈನಿಕರು ಮತ್ತು ಮಾಜಿ ಸೈನಿಕರು/ ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು ಶೇ 10. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ಶೇ 10.












Click it and Unblock the Notifications