Republic Exit Poll LIVE: ಕರ್ನಾಟಕದಲ್ಲಿ ಯಾರಿಗೆ ಅತಿಹೆಚ್ಚು ಮತ?
ಬೆಂಗಳೂರು: ಕರ್ನಾಟಕ ಚುನಾವಣೆ ಮತದಾನ ಮುಕ್ತಾಯವಾದ ಬಳಿಕ, ಸರ್ಕಾರ ರಚಿಸೋದು ಯಾರು? ಅನ್ನೋ ಕುತೂಹಲ ಮೂಡಿದೆ. ಆ ಕುತೂಹಲವನ್ನ ಎಕ್ಸಿಟ್ ಪೋಲ್ ಒಂದಷ್ಟು ತಣಿಸುತ್ತಿದೆ. ಆ ಪ್ರಕಾರ ಕರ್ನಾಟಕದಲ್ಲಿ ಅತಿಹೆಚ್ಚು ವೋಟಿಂಗ್ ಶೇರ್ ಅಂದರೆ ಮತದ ಪ್ರಮಾಣ ಪಡೆಯೋದು ಯಾರು? ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.
ಅಂದಹಾಗೆ ಸರ್ಕಾರ ರಚನೆಗೆ ಮತ ಪ್ರಮಾಣ ಗಣನೆಗೆ ಬರುವುದಿಲ್ಲ, ಆದರೆ ಸ್ಥಾನಗಳೇ ಮುಖ್ಯವಾಗುತ್ತವೆ. ಆದರೂ ಪಕ್ಷಗಳ ಗೆಲುವಿನಲ್ಲಿ ಮತ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಜಾಗಗಳಲ್ಲಿ ಕೆಲವೇ ಮತಗಳ ಅಂತರದಲ್ಲೂ ಅಭ್ಯರ್ಥಿಗಳು ಸೋತು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಮತ ಪ್ರಮಾಣದ ಏರಿಳಿತ ಹೆಚ್ಚು. ಹಾಗೇ ಕೆಲವು ಭಾಗದಲ್ಲಿ ಒಂದು ಪಕ್ಷ ಪ್ರಬಲವಾಗಿದ್ದು, ಮತ್ತೊಂದು ಭಾಗದಲ್ಲಿ ತುಂಬಾ ದುರ್ಬಲವಾಗಿದ್ದರೂ ಹೀಗೆ ಆಗುತ್ತದೆ. ಹೀಗಾಗಿ 2023ರ ಕರ್ನಾಟಕ ಚುನಾವಣೆಯ ಮತ ಹಂಚಿಕೆ ಪ್ರಮಾಣ ಎಷ್ಟಿರಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ?
ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಸಂಸ್ಥೆ ಎಕ್ಸಿಟ್ ಪೋಲ್ ಪ್ರಕಾರ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಶೇಡಕಾ 36 ರಷ್ಟು ಮತ ಪಡೆಯಲಿದೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ತನ್ನ ಮತ ಗಳಿಕೆ ಪ್ರಮಾಣವನ್ನ ಶೇ. 40ಕ್ಕೆ ಏರಿಕೆ ಮಾಡಿಕೊಂಡಿದ್ದರೆ, ಜೆಡಿಎಸ್ ವೋಟ್ ಶೇರಿಂಗ್ ಪ್ರಮಾಣ ಶೇ. 17ರಷ್ಟು ಇರಲಿದೆ ಎಂದು ಎಕ್ಸಿಟ್ ಪೋಲ್ ತಿಳಿಸಿದೆ. ಈ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಜೊತೆಗೆ ಮತ ಗಳಿಕೆ ಪ್ರಮಾಣ ಕೂಡ ಶೇ. 40ರಷ್ಟು ಇರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
2018ರಲ್ಲಿ ಹೇಗಿತ್ತು ಪರಿಸ್ಥಿತಿ?
ಹೌದು, 104 ಸ್ಥಾನ ಗೆದ್ದ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 80 ಸ್ಥಾನ ಪಡೆದು 2ನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್ 2018ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಆದರೆ ಜೆಡಿಎಸ್ ಮಾತ್ರ ಶೇ. 18.3 ಮತ ಪಡೆದು 37 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಜೆಡಿಎಸ್. ಹಾಗಾದರೆ ರಾಜಕೀಯ ಪಕ್ಷಗಳ ಗೆಲುವಿನಲ್ಲಿ ಮತಗಳಿಕೆ ಪ್ರಮಾಣ ಅದೆಷ್ಟು ಪರಿಣಾಮ ಬೀರುತ್ತದೆ ಗೊತ್ತಾ?
2008ರ ಚುನಾವಣೆಯಲ್ಲಿ ಏನಾಗಿತ್ತು?
ಹೌದು, 2018ರ ರೀತಿಯಲ್ಲೇ 2008ರಲ್ಲೂ ಇದೇ ರೀತಿ ಮ್ಯಾಜಿಕ್ ನಡೆದಿತ್ತು. ಆಗ 110 ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ ಆಗಲೂ 80 ಸ್ಥಾನ ಪಡೆದಿದ್ದ ಕಾಂಗ್ರೆಸ್ 2ನೇ ಸ್ಥಾನ ಪಡೆದಿತ್ತು. 2008ರ ಮತಹಂಚಿಕೆ ಪ್ರಮಾಣ ನೋಡುವುದಾದರೆ, ಮೊದಲ ಸ್ಥಾನ ಪಡೆದಿದ್ದ ಬಿಜೆಪಿ ಗಳಿಸಿದ್ದು ಶೇ. 33.86ರಷ್ಟು ಮತ ಮಾತ್ರ. ಆದರೆ 2ನೇ ಸ್ಥಾನದಲ್ಲಿ ಇದ್ದು ಕೇವಲ 80 ಸ್ಥಾನ ಪಡೆದಿದ್ದ ಕಾಂಗ್ರೆಸ್ ಶೇ. 34.76ರಷ್ಟು ಮತ ಗಳಿಸಿತ್ತು. ಹತ್ತಿರ ಹತ್ತಿರ ಶೇ. 1ರಷ್ಟು ಮತಗಳಿಕೆ ಹೆಚ್ಚಾಗಿಯೇ ಇತ್ತು. ಜೆಡಿಎಸ್ ಶೇಕಡಾ 18.96ರಷ್ಟು ಮತ ಗಳಿಸಿತ್ತು.
ಇದಿಷ್ಟೂ ಏನೇ ಇರಲಿ, ಮತ ಪ್ರಮಾಣದ ಜೊತೆಗೆ ಗೆಲ್ಲುವ ಸ್ಥಾನ ಪ್ರಮುಖ ಪಾತ್ರ ವಹಿಸಲಿವೆ. ರಿಪಬ್ಲಿಕ್ ಮತ್ತು ಪಿ-ಮಾರ್ಕ್ ಸಂಸ್ಥೆ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ವೋಟ್ ಶೇರಿಂಗ್‌ನಲ್ಲಿ ಮುಂದೆ ಇದೆ. ಮೇ 13ರಂದು ಫಲಿತಾಂಶ ಹೊರ ಬೀಳಲಿದ್ದು, ರಾಜಕೀಯ ಪಕ್ಷಗಳ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮತ್ತೊಂದು ಕಡೆ ಅತಂತ್ರ ಫಲಿತಾಂಶ ಹೊರಬೀಳುವ ಸಾಧ್ಯತೆ ಬಗ್ಗೆಯೂ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications