ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಚಿಗೆ ಸಿಲುಕಿದ ರಾಜ್ಯ ಬಿಜೆಪಿಯ ವೀರಶೈವ-ಲಿಂಗಾಯತ ನಾಯಕರು!

|
Google Oneindia Kannada News

ಬೆಂಗಳೂರು, ಫೆ. 21: ರಾಜ್ಯ ಬಿಜೆಪಿ ನಾಯಕರು ಪೇಚಿಕೆ ಸಿಲುಕಿದ್ದಾರೆ. ಒಂದೆಡೆ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ತಾರ್ಕಿಕ ಹಂತಕ್ಕೆ ಬಂದು ನಿಂತಿದೆ. ಇಂದು (ಫೆ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಿಂಗಾಯತ ಪಂಚಮಸಾಲಿ ಮಠಾಧೀಶರ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಭಾವಗಹಿಸುವ ಕುರಿತು ಬಿಜೆಪಿಯಲ್ಲಿನ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ದ್ವಂದ್ವಕ್ಕೆ ಸಿಲುಕಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಶುರುವಾಗಿದ್ದ ಪಾದಯಾತ್ರೆ ಬೆಂಗಳೂರಿಗೆ ಬಂದು ತಲುಪಿದೆ. ಹೀಗಾಗಿ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಲಿಂಗಾಯತ ಪಂಚಮಸಾಲಿ ಮಠಾಧೀಶರು ಹಮ್ಮಿಕೊಂಡಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಿದರೆ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದಂತೆ ಆಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸದಿದ್ದರೆ ಇಡೀ ಪಂಚಮಸಾಲಿ ಸಮುದಾಯವನ್ನು ಎದುರು ಹಾಕಿಕೊಂಡಂತಾಗುತ್ತದೆ.

ಹೀಗಾಗಿ ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನ ಮಾಡಲು ಸಚಿವ ಸಿ.ಸಿ. ಪಾಟೀಲ್ ಅವರು ನಿವಾಸದಲ್ಲಿ ಬಿಜೆಪಿ ಲಿಂಗಾಯತ ಸಮುದಾಯದ ನಾಯಕರಾದ ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಕೊಪ್ಪಳ‌ ಸಂಸದ ಕರಡಿ ಸಂಗಣ್ಣ, ಶಾಸಕ ಮಹೇಶ್ ಕುಮಟಳ್ಳಿ, ಸಿ ಎಂ ನಿಂಬಣ್ಣನವರ್ ಸೇರಿದಂತೆ ಹಲವರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ.

ಭಾಗವಹಿಸುವ ಬಗ್ಗೆ ತೀರ್ಮಾನ

ಭಾಗವಹಿಸುವ ಬಗ್ಗೆ ತೀರ್ಮಾನ

ಸಭೆಯಲ್ಲಿ ಭಾಗವಹಿಸಿದ್ದ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರು ಪಂಚಮಸಾಲಿ ಸಮಾವೇಶದಲ್ಲಿ ಭಾಗವಹಿಸಲು ತೀರ್ಮಾನ ಮಾಡಿದ್ದಾರೆ. ಸಭೆಯ ಬಳಿಕ ಮಾಹಿತಿ ಕೊಟ್ಟ ಸಚಿವ ಮುರುಗೇಶ್ ನಿರಾಣಿ ಅವರು, ನಾವೆಲ್ಲ ನಾಯಕರು ಪಂಚಮಸಾಲಿ ಸಮಾವೇಶಕ್ಕೆ ಹೋಗುತ್ತೇವೆ. ಮೀಸಲಾತಿ ಬೇಡಿಕೆ ಈಡೇರಿಕೆಗೆ ಸ್ವಾಮೀಜಿಗಳ ಬಳಿ ಸಮಯಾವಾಕಾಶ ಕೇಳುತ್ತೇವೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ವರದಿಯನ್ನು ಕೊಡುವಂತೆ ಕೇಳಿದೆ. ವರದಿ ಬಂದ ಬಳಿಕ ಪರಿಶೀಲನೆ ನಡೆಸಿ ಮೀಸಲಾತಿಯ ಬಗ್ಗೆ ತೀರ್ಮಾನ ಮಾಡಲಾಗುವುದು. ಅಲ್ಲಿಯವರೆಗೆ ಸಮಯಾವಾಕಾಶ ಕೊಡುವಂತೆ ಕೇಳುತ್ತೇವೆ ಎಂದಿದ್ದಾರೆ.

ಸಿ.ಸಿ. ಪಾಟೀಲ್ ಅಸಮಾಧಾನ

ಸಿ.ಸಿ. ಪಾಟೀಲ್ ಅಸಮಾಧಾನ

ಇದೇ ಸಂದರ್ಭದಲ್ಲಿ ಮಾತನಾಡಿರುವ ಸಚಿವ ಸಿ.ಸಿ. ಪಾಟೀಲ್ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಕುರಿತು ಸ್ವಾಮೀಜಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳು ಸರ್ಕಾರದ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಜೊತೆಗೆ ಅವರು ಸರ್ಕಾರಕ್ಕೆ ಗಡುವು ಕೊಡುವುದು ಕೂಡ ಸರಿಯಲ್ಲ. ಪಂಚಮಸಾಲಿ ಸಮಾವೇಶವನ್ನು ಕಾಂಗ್ರೆಸ್ ಪಕ್ಷದವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ರಾಜಕೀಯ ಲಾಭಕ್ಕೆ ಹೋಗಬಾರದು. ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಸಚಿವ ಸಿ.ಸಿ. ಪಾಟೀಪ್ ಅವರು ಹೇಳಿದ್ದಾರೆ.

ಸಿಎಂ ಮೀಸಲಾತಿ ಕೊಟ್ಟಿದ್ದಾರೆ

ಸಿಎಂ ಮೀಸಲಾತಿ ಕೊಟ್ಟಿದ್ದಾರೆ

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಿದ್ದೇ ಮುಖ್ಯಮಂತ್ರಿ ಯಡಿಯೂರಪ್ಪ. ಅದರಿಂದಾಗಿ ಈಗ 2ಎಗೆ ಸೇರಿಸಿ ಅಂತ ಕೇಳುವ ಅವಕಾಶ ಸಿಕ್ಕಿದೆ.

ಸ್ವಾಮೀಜಿಗಳಿಗೆ ಪರಿಸ್ಥಿತಿಯ ಮನವರಿಕೆ ಮಾಡುತ್ತೇವೆ. ಅವರು ಏನು ಹೇಳುತ್ತಾರೊ ಅದನ್ನು ಬಂದು ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸುತ್ತೇವೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನೊಳಗೆ ಎಲ್ಲ ನಿರ್ಧಾರ ಮಾಡಬೇಕು. ಸ್ವಾಮೀಜಿಗಳು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡರೆ ಯಾರಾದರೂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದು. ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಸ್ವಾಮೀಜಿಗಳಿಗೆ ಸರ್ಕಾರದ ಆಹ್ವಾನ

ಸ್ವಾಮೀಜಿಗಳಿಗೆ ಸರ್ಕಾರದ ಆಹ್ವಾನ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಕೊಡಲು ಸೂಚಿಸಲಾಗಿದೆ. ಸಂವಿಧಾನದ ಪ್ರಕಾರ ಹಿಂದುಳಿದ ವರ್ಗಗಳ ಮೂಲಕವೇ ಶಿಫಾರಸು ಬರಬೇಕು. ಈ ಮಧ್ಯೆ ಇಂದು ಪಂಚಮಸಾಲಿ ಸಮಾವೇಶ ನಡೆಯುತ್ತಿದೆ. ಸ್ವಾಮೀಜಿಗಳ ಜತೆ ಈಗಾಗಲೇ ಮಾತಾಡಿದ್ದೇವೆ. ಇಂದು ಸಮಾವೇಶದಲ್ಲೂ ಅದನ್ನು ಮನವರಿಕೆ ಮಾಡಿಕೊಡುತ್ತೇವೆ. ಸರ್ಕಾರ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮನವರಿಕೆ ಮಾಡುತ್ತೇವೆ. ಮಾತುಕತೆಗೆ ಬನ್ನಿ ಅಂತ ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ ಎಂದಿದ್ದಾರೆ.

English summary
Representatives of the Veerashiva-Lingayat community in the BJP have decided to attend the Lingayat Panchamsali conference held at the Palace grounds, Bengaluru for the 2A reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X