Government Employees: ಸರ್ಕಾರಿ ನೌಕರರ ಭತ್ಯೆ ಮರು ಪಾವತಿ, ಆದೇಶ
ಬೆಂಗಳೂರು, ಜನವರಿ 02: ಕರ್ನಾಟಕದ ಸರ್ಕಾರಿ ನೌಕರರು ವೇತನದ ಜೊತೆ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ. 7ನೇ ರಾಜ್ಯ ವೇತನ ಆಯೋಗದ ವರದಿ ಶಿಫಾರಸಿನ ಆಧಾರದ ಮೇಲೆ ನೌಕರರ ವಿವಿಧ ಭತ್ಯೆಗಳು ಸಹ ಏರಿಕೆಯಾಗಿವೆ. ಈಗ ಸರ್ಕಾರಿ ನೌಕರರಿಗೆ ತಪ್ಪಾಗಿ/ ಹೆಚ್ಚುವರಿಯಾಗಿ ಅಥವಾ ಕಡಿಮೆಯಾಗಿ ಪಾವತಿಸಲಾದ ಭತ್ಯೆಗಳನ್ನು ಸರಿಪಡಿಸಿ ಮರು ಪಾವತಿಸುವ ಕುರಿತು ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಈ ಕುರಿತು ವಿಜಯ ಈ ರವಿಕುಮಾರ್ ಜಂಟಿ ನಿರ್ದೇಶಕರು (ಆಡಳಿತ) ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸರ್ಕಾರಿ ನೌಕರರಿಗೆ ತಪ್ಪಾಗಿ/ ಹೆಚ್ಚುವರಿಯಾಗಿ ಅಥವಾ ಕಡಿಮೆಯಾಗಿ ಪಾವತಿಸಲಾದ ಭತ್ಯೆಗಳನ್ನು ಸರಿಪಡಿಸಿ ಮರು ಪಾವತಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ ಆದೇಶ ದಿನಾಂಕ 11-01-2019 ಸೇರಿದಂತೆ ವಿವಿಧ ಆದೇಶ ಉಲ್ಲೇಖಿಸಲಾಗಿದೆ.

ಆದೇಶದ ವಿವರಗಳು: ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. HRMS 2.0 Arrears Module date Base ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಲವು ಅಂಶಗಳು ಕಂಡು ಬಂದಿರುತ್ತವೆ.
* ವಿವಿಧ ವೃಂದ/ ಹುದ್ದೆಗಳಿಗೆ ಭತ್ಯೆಗಳನ್ನು ಅನ್ವಯಿಸದಿದ್ದರೂ ಸಹ ಭತ್ಯೆ ಸೆಳೆಯಲಾಗಿರುತ್ತದೆ.
* ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.
* ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲ್ಲಿ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
* ವೃಂದ ಬದಲಾವಣೆಯಾದಾಗ ಹಾಗೂ ಮರು ನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
* ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.
ಶಿಕ್ಷಣ ಇಲಾಖೆಯ ಆಗಸ್ಟ್ 2024ರಿಂದ ಅಕ್ಟೋಬರ್ 2024ರ ಮಾಹೆಯಲ್ಲಿ ಸೆಳೆದಿರುವ ಭತ್ಯೆಗಳನ್ನು ಪರಿಶೀಲಿಸಿದಾಗ ನಮ್ಮ ಇಲಾಖೆಗೆ ಅನ್ವಯಿಸದ ಭತ್ಯೆಗಳನ್ನು ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ. ಪ್ರಭಾರ ಭತ್ಯೆ ಹಾಗೂ ಎಫ್‌ಟಿಎ ಅನ್ನು ವೇತನ ಬಿಲ್ಲಿನಲ್ಲಿ ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ.
ಪ್ರಸ್ತಾಪಿಸಿರುವ ಭತ್ಯೆಗಳನ್ನು ಸೆಳೆಯಲು ವೇತನ ಬಟವಾಡೆ ಅಧಿಕಾರಿಗಳು ಸರ್ಕಾರ/ ಇಲಾಖೆ/ ಸಕ್ಷಮ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ವಯ ಸೆಳೆಯತಕ್ಕದ್ದು, ಒಂದು ವೇಳೆ ವ್ಯತಿರಿಕ್ತವಾಗಿ ಡ್ರಾ ಮಾಡಿದ್ದಲ್ಲಿ ಸಂಬಂಧಿಸಿದ ವೇತನ ಬಡವಾಡೆ ಅಧಿಕಾರಿಗಳು ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಮತ್ತು ಮಾನ್ಯ ಮಹಾಲೇಖಪಾಲರ ಕಛೇರಿ ಅಕ್ಷೇಪಣೆಗಳಿಗೆ ವೇತನ ಬಡವಾಡೆ ಅಧಿಕಾರಿಗಳು ಬಾಧ್ಯಸ್ಥರಾಗಿರುತ್ತಾರೆಂದು ಸ್ಪಪಡಿಸಿದೆ.
ಎಲ್ಲಾ ಡಿ.ಡಿ.ಓ ಗಳು ತುರ್ತಾಗಿ ತಮ್ಮ ಹಂತದಲ್ಲಿ ಸೆಳೆಯಲಾಗುತ್ತಿರುವ ವಿವಿಧ ರೀತಿಯ ಭತ್ಯೆಗಳನ್ನು ಪರಿಶೀಲಿಸಿ, ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ HRMS 2.0 ತಂತ್ರಾಂಶದಲ್ಲಿ ಅಳವಡಿಸಲು ಆದೇಶ ಪ್ರತಿಗಳನ್ನು ಸಲ್ಲಿಸುವುದು ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು, ಭತ್ಯೆಗಳ ವರ್ಗೀಕರಣ ಸರಿಪಡಿಸುವುದು.
ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸಿ HRMS ಕೇಂದ್ರ ಕಛೇರಿಗೆ ಮಾಹಿತಿ ಸಲ್ಲಿಸಲು ತಿಳಿಸಿದೆ. ಇನ್ನಿತರೆ ಭತ್ಯೆಗಳಿಗೆ ಸಂಬಂಧಿಸಿದ ಆದೇಶಗಳನ್ನು ತುರ್ತಾಗಿ HRMS ಕೇಂದ್ರ ಕಛೇರಿಗೆ ಸಲ್ಲಿಸುವುದು ಎಂದು ಹೇಳಿದೆ.
ಶೀಘ್ರದಲ್ಲೇ HRMS 2.0 Payroll Module ನಲ್ಲಿ ವೇತನ ಸೆಳೆಯಬೇಕಾಗಿರುವುದರಿಂದ ತಿಳಿಸಿರುವಂತೆ ಎಲ್ಲಾ ಡಿ.ಡಿ.ಓಗಳನ್ನು ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ತುರ್ತಾಗಿ ಪರಿಶೀಲಿಸಿಕೊಂಡು ಸೆಳೆಯುತ್ತಿರುವ ಭತ್ಯೆಗಳು ಸರಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ದೃಢೀಕರಿಸಿ ಸಲ್ಲಿಸುವುದು.
ಈ ರೀತಿ ಧೃಡೀಕರಣ ನೀಡದ ಭತ್ಯೆಗಳು HRMS 2.0 ನಲ್ಲಿ ಸೆಳೆಯಲು ಸಾಧ್ಯವಾಗುವುದಿಲ್ಲ. ತಪ್ಪಾಗಿ ಭತ್ಯೆಗಳನ್ನು ಸೆಳೆಯುತ್ತಿರುವ ನೌಕರರ ಜಿಲ್ಲಾವಾರು ಪಟ್ಟಿಗಳನ್ನು ಲಗತ್ತಿಸಿದ್ದು, ಸುತ್ತೋಲೆಯಲ್ಲಿ ತಿಳಿಸಿರುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು.
ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ತುರ್ತಾಗಿ ಕ್ರಮಹಿಸಿ ಸಂಬಂಧಿಸಿದ ತಾಲ್ಲೂಕುಗಳು ಡಿ.ಡಿ.ಓಗಳು ಆದೇಶದಂತೆ ಶಿಕ್ಷಣ ಇಲಾಖೆಗೆ ನಿಗದಿಪಡಿಸಿದ ಭತ್ಯೆಗಳನ್ನು ಮಾತ್ರ ಸೆಳೆಯುತ್ತಿರುವ ಬಗ್ಗೆ ಪರಿಶೀಲಿಸಿ ತಾಲ್ಲೂಕಿನ ಎಲ್ಲಾ ಡಿ.ಡಿ.ಓಗಳ ಮಾಹಿತಿಗಳನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಕ್ರೋಢೀಕರಿಸಿ ತುರ್ತಾಗಿ ಸಲ್ಲಿಸುವಂತೆ ತಿಳಿಸಿದೆ ಎಂದು ಹೇಳಿದೆ.












Click it and Unblock the Notifications