ಸಚಿವ ಉಮೇಶ್ ಕತ್ತಿ ಮೇಲೆ ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ!
ಬೆಂಗಳೂರು, ಫೆ. 16: ಅವಕಾಶ ಸಿಕ್ಕರೆ ಸಾಕು ರಾಜ್ಯ ಸರ್ಕಾರದ ಸಚಿವರ ಮೇಲೆ ಮುಗಿಬೀಳುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮತ್ತೊಂದು ಸದಾವಕಾಶ ಸಿಕ್ಕಿದೆ. ಈ ಸಲ ಸರ್ಕಾರದ ತೀರ್ಮಾನವನ್ನು ಬಲವಾಗಿ ಖಂಡಿಸಿರುವ ಅವರು, ಆಹಾರ ಆಹಾರ ಸಚಿವ ಉಮೇಶ್ ಕತ್ತಿ ಅವರ ಮೇಲೆ ಕಿಡಿ ಕಾರಿದ್ದಾರೆ. ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಚಿವ ಕತ್ತಿ ಅವರು ಈ ಬಾರಿ ಇಡೀ ನಾಡಿನ ಜನರೊಂದಿಗೆ ಸ್ವಪಕ್ಷದ ನಾಯಕರು ಹಾಗೂ ಶಾಸಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಬಿಪಿಎಲ್ ಕಾರ್ಡ್ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ಅವರು ಕೊಟ್ಟಿದ್ದ ಹೇಳಿಕೆ ಇದಕ್ಕೆಲ್ಲ ಕಾರಣವಾಗಿದೆ. ಇದೇ ವಿಚಾರದ ಕುರಿತು ವಿಧಾನಸೌಧದಲ್ಲಿ ಶಾಸಕ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ. ರೇಣುಕಾಚಾರ್ಯ ಏನು ಹೇಳಿದ್ದಾರೆ? ಮುಂದಿದೆ ಸಂಪೂರ್ಣ ವಿವರ.

ಕತ್ತಿ ಮೇಲೆ ರೇಣುಕಾಚಾರ್ಯ ಗರಂ!
ಆಹಾರ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಯಿಂದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಗರಂ ಆಗಿದ್ದಾರೆ. ಈ ಹೇಳಿಕೆ ಅವರದ್ದೊ? ಅಥವಾ ಐಎಎಸ್ ಲಾಭಿಯದ್ದೊ ಗೊತ್ತಿಲ್ಲ. ನಮ್ಮದು ಎಲ್ಲಾ ವರ್ಗಗಗಳ ಸರ್ಕಾರ. ಸಚಿವ ಕತ್ತಿ ಹೇಳಿರುವಂತೆ ಆದೇಶವೇ ಆಗಿಲ್ಲ. ಹಾಗೆ ಹೇಳಿಕೆ ಕೊಡುವುದರಿಂದ ಪಕ್ಷದ ವರ್ಚಸ್ಸಿಗೆ ದಕ್ಕೆ ಆಗುತ್ತದೆ. ಇಂತಹ ದ್ವಂದ್ವ ಹೇಳಿಕೆಯನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ನೀಡಬಾರದು ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ.

ನಾವು ಇಟ್ಟುಕೊಳ್ಳಬಹುದು, ಅವ್ರು ಬೇಡವಾ?
ಬೇಕಾದರೆ ನಕಲಿ ಬಿಪಿಎಲ್ ಕಾರ್ಡ್‌ಗಳ ಬಗ್ಗೆ ತನಿಖೆ ನಡೆಸಿ ಪತ್ತೆಮಾಡಿ ರದ್ದು ಮಾಡಲಿ. ಬಡವರು ಮನರಂಜನೆಗೋಸ್ಕರ ಟಿವಿ ಇಟ್ಟುಕೊಂಡಿರುತ್ತಾರೆ. ಮಹಿಳೆಯರು ಒತ್ತಡ ಮರೆಯಲು ಟಿವಿ ವೀಕ್ಷಣೆ ಮಾಡುತ್ತಾರೆ. ಕೆಲವು ಖಾಸಗಿ ಬ್ಯಾಂಕ್‌ಗಳು ಡಿಪಾಸಿಟ್ ಇಲ್ಲದೆ ಬೈಕ್‌ಗೆ ಸಾಲವನ್ನು ಕೊಡುತ್ತಾರೆ. ಸಣ್ಣಪುಟ್ಟ ವ್ಯಾಪಾರಸ್ಥರು, ಬೈಕ್ ಮೇಲೆ ಮೀನು ಮಾರಾಟ ಮಾಡುವವರು, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವವರು ಬೈಕ್ ಹೊಂದಿರುತ್ತಾರೆ. ನಾವು ಫ್ರಿಡ್ಜ್ ಇಟ್ಟುಕೊಳ್ಳಬಹುದು, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಕ್ ಇಟ್ಟುಕೊಳ್ಳಬಾರದಾ? ಎಂದು ರೇಣುಕಾಚಾರ್ಯ ಅವರು ಉಮೇಶ್ ಕತ್ತಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಜೈಲಿಗೆ ಹೋಗಿ ಬಂದಿದ್ದೇನೆ
ಹಿಂದೆ 2003ರಲ್ಲಿ ಬಿ.ಪಿ.ಎಲ್ ಕಾರ್ಡ್ ವಿಚಾರದಲ್ಲಿ ಉಗ್ರ ಹೋರಾಟ ಮಾಡಿದ್ದೇನೆ. ಬಡವರಿಗೆ ಬಿಪಿಎಲ್ ಕಾರ್ಡ್ ಕೊಡಿಸಲು ಹೋರಾಟ ಮಾಡಿ ಜೈಲಿಗೂ ಹೋಗಿ ಬಂದಿದ್ದೀನಿ. ಸಚಿವ ಉಮೇಶ್ ಕತ್ತಿ ಅವರು ಕೊಟ್ಟಿರುವುದು ಸರ್ಕಾರದ ಹೇಳಿಕೆ ಅಲ್ಲ. ಆ ಮಂತ್ರಿಗೆ ಯಾರೋ ಅಧಿಕಾರಿ ಹೇಳಿರಬಹುದು. ಅಧಿಕಾರಿ ಮಾತನ್ನು ಕತ್ತಿ ಹೇಳಿದ್ದಾರೆ. ಅದಕ್ಕೆ ನಮ್ಮ ವಿರೋಧ ಇದೆ ಅಂತ ಈಗಾಗಲೇ ಹೇಳಿದ್ದೇನೆ. ಉಮೇಶ್ ಕತ್ತಿ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಉಮೇಶ್ ಕತ್ತಿ ಹೇಳಿದ್ದೇನು?
ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿದವರು ಸೇರಿದಂತೆ ಬೈಕ್, ಟಿವಿ, ಪ್ರಿಡ್ಜ್ ಹೊಂದಿದವರು ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ತಕ್ಷಣ ಹಿಂದಿರುಗಿಸಬೇಕು ಎಂದು ನಿನ್ನೆ (ಫೆ.15) ರಂದು ಬೆಳಗಾವಿಯಲ್ಲಿ ಸಚಿವ ಕತ್ತಿ ಹೇಳಿಕೆ ನೀಡಿದ್ದರು. ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತು ಅನಗತ್ಯ ಹೇಳಿಕೆ ನೀಡಿದ್ಯಾಕೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಹಾರ ಸಚಿವ ಉಮೇಶ್ ಕತ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅದಾದ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಆಹಾರ ಸಚಿವ ಉಮೇಶ್ ಕತ್ತಿ ಅವರು, ಬಿ.ಪಿ.ಎಲ್ ಕಾರ್ಡ್ ಹೊಂದಿರುವವರ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಆಹಾರ ಸಚಿವನಾದ ಬಳಿಕ ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ ಎಂದು ಮಾದ್ಯಮ ಪ್ರಕಟಣೆ ಮೂಲಕ ಉಮೇಶ್ ಕತ್ತಿ ಅವರು ತಿಳಿಸಿದ್ದರು.