ಬ್ರಹ್ಮಾಂಡ ಗುರೂಜಿ-ಡಿಕೆ ಶಿವಕುಮಾರ್ ಭೇಟಿ, ಸಿಎಂ ಬದಲಾವಣೆ ಚರ್ಚೆ ಹೊತ್ತಲ್ಲೇ ಮಹತ್ವದ ಚರ್ಚೆ
ಬ್ರಹ್ಮಾಂಡ ಗುರೂಜಿ ಖ್ಯಾತಿಯ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇವರಿಬ್ಬರ ಭೇಟಿಯು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸದಾ ಭವಿಷ್ಯ ನುಡಿಯುವ ಮೂಲಕ ಖ್ಯಾತಿ ಗಳಿಸಿರುವ ಬ್ರಹ್ಮಾಂಡ ಗುರೂಜಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ ವಿಚಾರಕ್ಕೆ ರೆಕ್ಕೆಪುಕ್ಕ ಬಂದಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲೇ ಬ್ರಹ್ಮಾಂಡ ಗುರೂಜಿ ಅವರು ಅಚ್ಚರಿ ಮೂಡಿಸಿದ್ದಾರೆ.
ಈ ಫೋಟೋಗಳನ್ನು ಡಿಕೆ ಶಿವಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧಿ ಪಡೆದ ಜ್ಯೋತಿಷಿಗಳಾದ ಶ್ರೀನರೇಂದ್ರ ಬಾಬು ಶರ್ಮಾ ಅವರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು ಎಂದು ಹೇಳಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಡಿಕೆ ಶಿವಕುಮಾರ್ ಅವರ ಬಗ್ಗೆ ಗುರೂಜಿ ರಾಜಕೀಯ ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.

ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆ ಕುರಿತಾಗಿಯೂ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದರು. ಮಿಥುನ ರಾಶಿಯಲ್ಲಿರುವ ಹೆಸರಾಂತ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಅವರ ಸಂಬಂಧಗಳು ಬಯಲಿಗೆ ಬರಲಿವೆ. ಡೈವರ್ಸ್ ಪ್ರಕರಣಗಳು ಹೆಚ್ಚಾಗಲಿವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದೂ ಭವಿಷ್ಯವಾಣಿ ನುಡಿದಿದ್ದರು.
ಡಿಕೆಶಿ ರಾಜಕೀಯ ಭವಿಷ್ಯ ನುಡಿದಿದ್ದ ಗುರೂಜಿ
ಅಲ್ಲದೆ 2025ರಿಂದ 2027ರವರೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಹೊಸ ಅವಕಾಶಗಳು ಬರಲಿವೆ. ಉನ್ನತ ಸ್ಥಾನಗಳು ಅರಸಿ ಬರಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಹಲವು ಮುಖ್ಯಮಂತ್ರಿಗಳು ಅಥವಾ ಮೂರು ರಾಜ್ಯಪಾಲರು ನೇಮಕವಾಗುವ ಮೂಲಕ ರಾಜ್ಯ ಮೂರು ಭಾಗವಾಗುವ ಸಾಧ್ಯತೆಯೂ ಇದೆ. ಏಪ್ರಿಲ್ ತಿಂಗಳಲ್ಲಿ ಗುರು, ಮೇ ತಿಂಗಳಲ್ಲಿ ರಾಹು-ಕೇತು ಗ್ರಹಗಳು ಬದಲಾಗುವುದರಿಂದ, ದೊಡ್ಡ ಗ್ರಹಗಳ ಪ್ರಭಾವದಿಂದ 2025ರಿಂದ 2027ರವರೆಗೆ ರಾಜಕೀಯ ವಲಯದ ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರದಲ್ಲಿ ಶೇ 80ರಷ್ಟು ಭವಿಷ್ಯ ನಿಜವಾಗಲಿದೆ. ಮುಂದಿನ ಎರಡು ವರ್ಷದೊಳಗೆ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿದ್ದಾರೆ. ಹಲವು ದೇಶಗಳು ಸೇರಿ ಭಾರತದ ಮೇಲೆ ಯುದ್ಧ ಸಾರಲಿವೆ ಎಂದೂ ಬ್ರಹ್ಮಾಂಡ ಗುರೂಜಿ ಶಾಕಿಂಗ್ ಭವಿಷ್ಯ ನುಡಿದಿದ್ದರು.
2025ನೇ ಸಾಲಿನಲ್ಲಿ ಇಬ್ಬರು ಖ್ಯಾತ ನಟಿಯರು, ಒಬ್ಬ ಖ್ಯಾತ ನಟನ ಸಾವು ಸಂಭವಿಸಲಿದೆ. ಈ ವರ್ಷದಲ್ಲಿ ಕರ್ನಾಟಕದ ಇಬ್ಬರು ಸ್ಟಾರ್ ನಟಿಯರು ಹಾಗೂ ನಟರಿಗೆ ಮ್ಯತ್ಯು ಗಂಡಾಂತರ ಇದೆ. ಈ ಹಿಂದೆ ನಾನು ತಿರುಪತಿಯಲ್ಲಿ ಕಾಲ್ತುಳಿತದ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ಜಗತ್ತಿನಲ್ಲಿ 7 ದೇಶಗಳು ನಶಿಸಿ ಹೋಗುತ್ತವೆ. ಮತ್ತೊಂದೆಡೆ ಸುನಾಮಿ ಉಂಟಾಗಿ ಭಾರೀ ಗಂಡಾಂತರ ಕಾದಿದೆ. ಈ ಬಾರಿ ಸೂರ್ಯ ರಶ್ಮಿ ಗಂಗಾಧರೇಶ್ವರನನ್ನು ಸ್ಪರ್ಶಿಸಿಲ್ಲ, ಕೋವಿಡ್ ಸಮಯದಲ್ಲೂ ಕೋವಿಡ್ ಸಮಯದಲ್ಲೂ ರಶ್ಮಿ ಸ್ಪರ್ಶವಾಗಿರಲಿಲ್ಲ. ಇದೆಲ್ಲ ಗಂಡಾಂತರದ ಸೂಚನೆ ಎಂದು ಎಚ್ಚರಿಕೆ ನೀಡಿದ್ದರು. ಗುರೂಜಿ ಹೇಳಿರುವ ಭವಿಷ್ಯವಾಣಿಗಳು ಕೆಲವು ನಿಜವಾಗಿದ್ದು, ನಿರ್ದಿಷ್ಟವಾಗಿ ಡಿಕೆ ಶಿವಕುಮಾರ್ ಅವರ ವಿಚಾರದಲ್ಲಿ ನುಡಿದಿರುವ ಭವಿಷ್ಯ ನಿಜವಾಗುತ್ತಾ ಅನ್ನೋದು ಕಾದುನೋಡಬೇಕಿದೆ.












Click it and Unblock the Notifications