Mekedatu Project: ಮೇಕೆದಾಟು ಯೋಜನೆ; ತಮಿಳುನಾಡಿಗೆ ಹಿನ್ನಡೆ, ನಮಗೆ ಸಿಕ್ಕ ನ್ಯಾಯ: ಡಿ ಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 13: ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು, ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮೇಕೆದಾಟು ಯೋಜನೆ ಡಿಪಿಆರ್ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದರಿಂದ ತಮಿಳುನಾಡಿಗೆ ಹಿನ್ನಡೆಯಾಗಿದೆಯಲ್ಲಾ ಎಂದು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ನಂತರ ವಿವರವಾಗಿ ಮಾತನಾಡುತ್ತೇನೆ. ಇದು ಯಾವುದೇ ರೀತಿಯ ಹಿನ್ನಡೆಯಲ್ಲ. ಬದಲಿಗೆ ನ್ಯಾಯ ಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು, 'ನಮ್ಮ ನೀರು, ನಮ್ಮ ಹಕ್ಕು' ಯೋಜನೆ. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡುತ್ತಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ರಾಜ್ಯದ ಜನರ ಪ್ರಾರ್ಥನೆ, ಜನರ ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ ಎಂದು ತಿಳಿಸಿದರು.

ನ್ಯಾಯಾಲಯಗಳ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಹೀಗಾಗಿ ನಾವು ಈ ಯೋಜನೆ ಮುಂದುವರಿಸಿಕೊಂಡು ಹೋಗುತ್ತೇವೆ. ಈ ಯೋಜನೆಯನ್ನು ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮಾಡಲಾಗುತ್ತಿದೆ. ನೀರಿನ ಕೊರತೆ ಉಂಟಾದಾಗ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟೆ ನೆರವಾಗಲಿದೆ. ಇದು ಬೆಂಗಳೂರಿಗರ ಗೆಲುವು. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಈಗಲಾದರೂ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಮಾನವೀಯತೆ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ನ್ಯಾಯಾಲಯವು ಇಂತಹ ವಿಚಾರದಲ್ಲಿ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ)ಗೆ ಮಾರ್ಗದರ್ಶನ ನೀಡಲಿದ್ದು, ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಸಿಡಬ್ಲ್ಯೂಸಿ ಈ ಯೋಜನೆಗೆ ಸಹಕಾರ ನೀಡುವುದೇ ಎಂದು ಮಾಧ್ಯಮದವರು ಕೇಳಿದಾಗ, "ಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು 2028ಕ್ಕೆ ಸಿಎಂ ಆಗಬೇಕು, ಅಲ್ಲಿಯವರೆಗೆ ಸಿದ್ದರಾಮಯ್ಯ ಅವರೇ ಸಿಎಂ. ಈ ಮಾತನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆ ನಿಂತು ಹೇಳುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬಹಳ ಸಂತೋಷ. ಮುಖ್ಯಮಂತ್ರಿ ಇದ್ದಾರೆ, ಇರಲಿ. ಅದರಲ್ಲಿ ತಪ್ಪೇನಿದೆ. ನಮಗೆ ಯಾವುದೇ ಬೇಸರವಿಲ್ಲ. ನಾವು ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ, ಒಟ್ಟಿಗೆ ಇದ್ದೇವೆ, ಮುಂದೆಯೂ ಒಟ್ಟಿಗೆ ಇರುತ್ತೇವೆ" ಎಂದು ತಿಳಿಸಿದರು.
ಕೇಂದ್ರ ಸಚಿವರ ಭೇಟಿ ಕುರಿತು ಮಾತನಾಡಿ, ಕಳೆದ ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ. ಈ ಬಾರಿ ಹೋದಾಗ ಭೇಟಿ ಮಾಡಬೇಕು. ನಾನು ನನ್ನದೇ ಆದ ಯೋಜನೆ ರೂಪಿಸುತ್ತಿದ್ದೇನೆ. ಮಹದಾಯಿ, ಎತ್ತಿನಹೊಳೆ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆ ತಕರಾರು ಹಾಕಿಕೊಂಡು ಕೂತಿದ್ದಾರೆ. ಅಲ್ಲಿ ಮಣ್ಣು ತೆಗೆದು ರೆವೆನ್ಯೂ ಭೂಮಿಯಲ್ಲಿ ಪಕ್ಕಕ್ಕೆ ಹಾಕಿದ್ದೇವೆ. ಈಗ ಅದನ್ನು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ಅರಣ್ಯಕ್ಕೆ ಪರ್ಯಾಯ ಭೂಮಿ ನೀಡಲು ಮುಂದಾಗಿದ್ದೇವೆ. ಅದಕ್ಕೂ ಅನುಮತಿ ನೀಡುತ್ತಿಲ್ಲ. ಇದರಿಂದ ಯೋಜನಾ ವೆಚ್ಚ ಎಷ್ಟು ಏರಿಕೆಯಾಗಲಿದೆ. ಅವರು ನಮಗೆ ಕೊಡುವ ಹಣ ನೀಡುತ್ತಿಲ್ಲ, ಯೋಜನೆಗಳಿಗೆ ಅನುಮತಿಯನ್ನೂ ನೀಡುತ್ತಿಲ್ಲ. ರಾಜ್ಯಕ್ಕೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂಬುದನ್ನು ನ.14ರಂದು ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.












Click it and Unblock the Notifications