ಸೆ. 15ರಂದು ಸಂವಿಧಾನದ ಪೀಠಿಕೆ ಓದು; ನೀವು ನೋಂದಣಿ ಮಾಡಿಕೊಳ್ಳಿ
ಬೆಂಗಳೂರು, ಸೆಪ್ಟೆಂಬರ್ 10; ಕರ್ನಾಟಕ ಸರ್ಕಾರ ಭಾರತ ದೇಶದ ಪ್ರಜೆಯಾಗಿ ಹೆಮ್ಮೆಪಡಲು ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದೆ. ಸೆಪ್ಟೆಂಬರ್15ರಂದು ಭಾರತ ಸಂವಿಧಾನದ ಪೀಠಿಕೆ ಓದಲು ಎಲ್ಲರಿಗೂ ಅವಕಾಶ ನೀಡಿದೆ. ಜನರು, ವಿದ್ಯಾರ್ಥಿಗಳು, ಸರ್ಕಾರಿ ಕಚೇರಿ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಆನ್‍ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು.
ರಾಜ್ಯ ಸರ್ಕಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ, ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮ ಆಯೋಜನೆ ಮಾಡಿದೆ. ಭಾರತ ಸಂವಿಧಾನದ ಪೀಠಿಕೆಯನ್ನು ಸೆ.15ರ ಬೆಳಗ್ಗೆ 10 ಗಂಟೆಗೆ ಪ್ರತಿಯೊಬ್ಬರೂ ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಸರ್ಕಾರ ಮನವಿ ಮಾಡಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಇಲಾಖೆ ಸಚಿವರು ಈ ಕಾರ್ಯಕ್ರಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಜನರು ಈ ಅವಕಾಶ ಉಪಯೋಗಿಸಿಕೊಳ್ಳಬೇಕು. ಆನ್‍ಲೈನ್‍ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು, ಸೆ.15ರಂದು ಸಂವಿಧಾನದ ಪೀಠಿಕೆಯನ್ನು ಓದಿ, ಅದನ್ನು ಪ್ರತಿಜ್ಞಾ ವಿಧಿಯಂತೆ ಸ್ವೀಕರಿಸಬೇಕು. ಅದರ ಫೋಟೋವನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿಕೊಂಡಲ್ಲಿ, ಎಲ್ಲರಿಗೂ ಅದೇ ವೆಬ್‍ಸೈಟ್ ಮೂಲಕವೇ ಪ್ರಮಾಣಪತ್ರ ದೊರೆಯಲಿದೆ.
ನೋಂದಣಿ ಸರಳ; ಸಂವಿಧಾನದ ಪೀಠಿಕೆ ಓದಲು ಆನ್‍ಲೈನ್ ನೋಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದೆ. ಸಮಾಜ ಕಲ್ಯಾಣ ಇಲಾಖೆ ರೂಪಿಸಿರುವ ವೆಬ್‍ಸೈಟ್ https://thepreamble-swdkar.in ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಮುಂತಾದ ವಿವರ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯ ಶಾಲೆಗಳು, ಶಿಕ್ಷಣ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಇಲಾಖೆಗಳ ಶಾಲೆ, ಕಾಲೇಜುಗಳು. ಎಲ್ಲ ರೀತಿಯ ಖಾಸಗಿ ಶಾಲೆ, ಕಾಲೇಜುಗಳು, ಹೀಗೆ ಕನಿಷ್ಟ 10 ಸದಸ್ಯರ ಗುಂಪು ಒಳಗೊಂಡು ನೋಂದಣಿ ಮಾಡಬೇಕು.
ಸಂವಿಧಾನದ ಪೀಠಿಕೆಯಲ್ಲಿರುವ ಪ್ರತಿಯೊಂದು ಪದಗಳು, ವಾಕ್ಯ ಬಹಳಷ್ಟು ಮುಖ್ಯವಾಗಿದ್ದು, ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ, ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಹೀಗಾಗಿ ಎಲ್ಲರೂ ಸಂವಿಧಾನದ ಪೀಠಿಕೆಯಾದ, "ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ, ಅವರಲ್ಲಿ ಭ್ರಾತೃತ್ವಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ 1949, ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ" ಎಂಬುದಾಗಿ ಓದಿ ಪ್ರತಿಯೊಬ್ಬರೂ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು.
ಸಂವಿಧಾನವು ಡಾ.ಅಂಬೇಡ್ಕರ್ ಅವರು ನಮಗೆ ನೀಡಿರುವ ಜ್ಞಾನ ದೀವಿಗೆ, ಸಮಾನತೆಯ ದೀವಿಗೆಯಾಗಿದೆ. ಹೀಗಾಗಿ ಸಂವಿಧಾನದ ಪೀಠಿಕೆ ಓದುವುದು ಮಹತ್ವವಾದ ಉದ್ದೇಶ ಹೊಂದಿದ್ದು, ಇದು ವಿದ್ಯಾರ್ಥಿಗಳು ತಮ್ಮ ರಾಷ್ಟ್ರ ನಿರ್ಮಿಸಿರುವ ಮೂಲಭೂತ ತತ್ವಗಳು, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಂವಿಧಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಪರಿಕಲ್ಪನೆ ಒಳಗೊಂಡಿದೆ. ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ನೆನಪಿಸುವ ಮೂಲಕ ದೇಶಭಕ್ತಿಯ ಭಾವನೆ ಮತ್ತು ಒಬ್ಬರ ದೇಶಕ್ಕೆ ಬಾಂಧವ್ಯ ಬೆಳೆಸುತ್ತದೆ. ನಾಗರಿಕರಾಗಿ ಅವರ ಹಕ್ಕುಗಳು, ಜವಾಬ್ದಾರಿಗಳನ್ನು ಅರಿಯಲು ಸಹಕಾರಿಯಾಗಲಿದೆ. ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಸಂವಿಧಾನದ ಪೀಠಿಕೆ ಒತ್ತಿ ಹೇಳುತ್ತದೆ.
ಶಾಲೆಯ ಪ್ರಾರ್ಥನೆಯ ಸಮಯದಲ್ಲಿ ಅದನ್ನು ಓದುವುದು, ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಒಳಗೊಳ್ಳುವಿಕೆಯ ಪ್ರಜ್ಞೆ ಹುಟ್ಟುಹಾಕಲು ಸಹಾಯ ಮಾಡುತ್ತದೆ. ಸಂವಿಧಾನ ಪೀಠಿಕೆ ಓದುವುದರಿಂದ ವಿದ್ಯಾರ್ಥಿಗಳಲ್ಲಿ ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದಂತಹ ಮೌಲ್ಯಗಳನ್ನು ತುಂಬಲು ಉತ್ತಜಿಸುತ್ತದೆ. ದೇಶದ ತಿಳುವಳಿಕೆಯುಳ್ಳ ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ತಯಾರಿಸಲು ಸಹಾಯ ಮಾಡುತ್ತದೆ.











Click it and Unblock the Notifications