ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಶೀಘ್ರ 10 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ
ಬೆಂಗಳೂರು, ನವೆಂಬರ್ 15: ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲಭೂತ ಸೌಕರ್ಯಗಳ ಅಭಾವಿರುವುದು ನಿಜ, ಅದನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು. ರಾಜ್ಯದ ಸರ್ಕಾರ ಶಾಲೆಗಳಲ್ಲಿ ಶಿಕ್ಷಕರ ಅಭಾವವಿದ್ದು, ಈ ಸಂಬಂಧ 13,000 ಶಿಕ್ಷಕರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 10,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದರು.
ಶಾಲಾ ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಅವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ, ಎಲ್ಲಾ ಶಿಕ್ಷಕರು ಮೆರಿಟ್ ಮೇಲೆ ಬಂದಿರುತ್ತಾರೆ. ಸಾಧನೆ ಮಾಡುವವರೆಲ್ಲಾ ಸರ್ಕಾರಿ ಶಾಲೆಯ ಮಕ್ಕಳೇ ಆಗಿದ್ದಾರೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ನಿರ್ಭಿತಾ, ಖಾಸಗಿ ಶಾಲೆಗಳಲ್ಲಿ ವ್ಯಾನ್, ಬಸ್ ವ್ಯವಸ್ಥೆ ಇರುತ್ತದೆ, ಪಾಲಿಕೆ ಶಾಲೆಗಳಿಗೆ ವ್ಯಸಸ್ಥೆ ಕಲ್ಪಿಸಬಹುದೇ ಎಂದು ಕೇಳಿದಾಗ, "ಶಾಲೆಗಳಿಗೆ ಹತ್ತಿರವಿರುವ ಮಕ್ಕಳೇ ಬರುವುದರಿಂದ ವಾಹನಗಳ ವ್ಯವಸ್ಥೆ ಮಾಡಿರುವುದಿಲ್ಲ. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇದೇ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು, "ಶಾಲೆಗಳಿಗೆ ದಾಖಲಾತಿ ಆಗುವ ಸಮಯದಲ್ಲೇ ಹತ್ತಿರದ ಶಾಲೆಗಳಿಗೆ ಸೇರಲು ಅರಿವು ಮೂಡಿಸಲಾಗುತ್ತಿದೆ. ಕೆಲವು ಮಕ್ಕಳು ದೂರದಿಂದ ಬರಲು ಇಚ್ಛಿಸುತ್ತಿದ್ದಾರೆ. ಹೊರ ವಲಯಗಳಲ್ಲಿ ಪಾಲಿಕೆಯ ಹೆಚ್ಚು ಶಾಲೆಗಳಿಲ್ಲ, ಅಲ್ಲಿಯೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದಾದ ಬಳಿಕ ಈ ಸಮಸ್ಯೆ ಕಡಿಮೆಯಾಗಲಿದೆ. ದಾಖಲಾತಿ ಆಗುವ ವೇಳೆ ಹತ್ತಿರದ ಶಾಲೆಗಳಿಗೆ ದಾಖಲಾತಿ ಮಾಡಲು ಪೋಷಕರಿಗೆ ಮನವಿ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಅವರು ಹೇಳಿದರು.
ಕಸ್ತೂರ ಬಾ ನಗರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಕ್ರೀಡಾಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ಕೊರತೆ ಇದ್ದು, ಸರ್ಕಾರದಿಂದ ಇದಕ್ಕೆ ಪರಿಹಾರವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು, ಶಿಕ್ಷಣ ಇಲಾಖೆಯಿಂದ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬೇರೆಯವರ ಸಹಯೋಗದಲ್ಲಿ ಸಣ್ಣ-ಸಣ್ಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಬಂಧ ಕ್ರೀಡಾ ಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋಬಳಿ ಮಟ್ಟದಲ್ಲಿ ಸುಮಾರು 300 ಕರ್ನಾಟಕ ಪಬ್ಲಿಕ್ ಶಾಲೆ ಮಾಡಲು ಮುಂದಾಗಿದ್ದೇವೆ. ಕ್ರೀಡೆ ಕುರಿತು ಮಕ್ಕಳಿಗೆ ನುರಿತ ತರಬೇತಿ ನೀಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಶ್ರೀರಾಂಪುರದ ಬಾಲಕಿಯರ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ, ಪೋಷಕರು ಎಸ್ಎಸ್ಎಲ್ ಸಿ ಮಕ್ಕಳಿಗೆ ಕ್ರೀಡೆಗೆ ಆದ್ಯತೆ ನೀಡದೇ ಬೋರ್ಡ್ ಪರೀಕ್ಷೆಗೆ ಹೊಚ್ಚು ಗಮನಹರಿಸುವಂತೆ ಒತ್ತಡ ಹಾಕುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರಿಸಿ, "ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಕ್ಕಳ ಭವಿಷ್ಯ ಬದಲಾಯಿಸುವ ಪ್ರಮುಖ ಘಟ್ಟವಾಗಿರುವುದರಿಂದ, ನೀವು ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗುತ್ತದೆ. ನೀವು ಆಯ್ಕೆ ಮಾಡುವ ವಿಷಯ ಸರಿಯಾಗಿರಬೇಕಾಗಿರುತ್ತದೆ. ಆದ ಕಾರಣ ಶಿಕ್ಷಕರು, ಪೋಷಕರು ಕೂಡಾ ಇದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಆಟ ಆಡುವ ಜೊತೆಗೆ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.












Click it and Unblock the Notifications