ಗ್ರಾಪಂಗಳಲ್ಲಿ ಆರ್ಥಿಕ ಶಿಸ್ತು ಕಾಪಾಡಲು ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು, ಅಕ್ಟೋಬರ್ 17: ಗ್ರಾಮ ಪಂಚಾಯ್ತಿಗಳಲ್ಲಿ ತೆರಿಗೆ ಸಂಗ್ರಹಿಸುವ ಬಿಲ್ ಕಲೆಕ್ಟರ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು, ವಿಫಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯ್ತಿಗಳು ಸ್ಥಳೀಯ ಸರ್ಕಾರಗಳಾಗಿದ್ದು, ಸ್ವತಃ ಆಡಳಿತ ನಡೆಸುವುದನ್ನು ರೂಢಿಸಿಕೊಳ್ಳಬೇಕು, ತಮ್ಮ ವ್ಯಾಪ್ತಿಗೆ ಬರುವ ವಿವಿಧ ಬಗೆಯ ತೆರಿಗೆಗಳಿಂದ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು ಶಕ್ತವಾಗಬೇಕು ಎಂದರು. ರಾಜ್ಯಾದ್ಯಂತ ನಡೆಯುತ್ತಿರುವ ಬೆಳೆ ಸಮೀಕ್ಷೆಗೆ ಸ್ಥಳೀಯ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ.
ರೈತರು ಅವರಿಗೆ ಸಹಕಾರ ನೀಡಬೇಕು.ಕರಾರುವಕ್ಕಾದ ಮಾಹಿತಿ ನೀಡುವುದರಿಂದ ವಿವಿಧ ಇಲಾಖೆಗಳಿಂದ ಪಡೆಯುವ ಸೌಲಭ್ಯವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಹಾಗೂ ಬೆಳೆ ಹಾನಿ ಮತ್ತು ಇತರೆ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ನಷ್ಟ ಪರಿಹಾರ ಪಡೆಯಲು ನೆರವಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರ ರೂಪಿಸಿರುವ ವೆಬ್‌ಸೈಟ್‌ಗೆ ಅಳವಡಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಅದರ ಒಳಗಾಗಿ ಯೋಜನೆ ಸಿದ್ಧಪಡಿಸಿ ಕಡ್ಡಾಯವಾಗಿ ವೆಬ್‌ಸೈಟ್‌ಗೆ ಅಳವಡಿಸಬೇಕು. ಇದರಲ್ಲಿ ವಿಫಲವಾದರೆ 14ನೇ ಹಣಕಾಸು ಆಯೋಗದ ಯೋಜನೆಯಡಿ ದೊರಕಬೇಕಾದ ಅನುದಾನ ದೊರಕುವುದಿಲ್ಲ ಹೀಗಾಗಿ ಎಚ್ಚರಿಕೆ ವಹಿಸಿ ನಿಗದಿತ ಸಮಯದಲ್ಲಿ ವೆಬ್‌ಸೈಟ್‌ಗೆ ಅಳವಡಿಸಿ ಎಂದರು.












Click it and Unblock the Notifications