Rashmika Mandanna: ರಶ್ಮಿಕಾ ಮಂದಣ್ಣ ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂದಿದ್ರು: ಶಾಸಕ ರವಿ ಗಣಿಗ ಆಕ್ರೋಶ
ಬೆಂಗಳೂರು, ಮಾರ್ಚ್ 03: ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲು ಹೋದಾಗ, ನನ್ನ ಮನೆ ಇರೋದು ಹೈದರಾಬಾದ್‌ನಲ್ಲಿ, ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ ಅಂದಿದ್ರು ಎಂದು ಶಾಸಕ ಗಣಿಗ ರವಿಕುಮಾರ್ ಅವರು ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚಿಗೆ ಬೆಂಗಳೂರಲ್ಲಿ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ತಾರೆಯರೇ ಭಾಗವಹಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ನಟಿ ರಶ್ಮಿಕ ಮಂದಣ್ಣ ವಿರುದ್ಧ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದರು. ಇದೀಗ ಶಾಸಕ ರವಿ ಗಣಿಗ ಅವರು ಕೂಡ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಕರ್ನಾಟಕ ಎಲ್ಲಿದೆ ಅಂತಾ ಗೊತ್ತಿಲ್ಲ, ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಕಳೆದ ಬಾರಿ ಶಾಸಕರೊಬ್ಬರು ಹೋಗಿ ಚಿತ್ರೋತ್ಸವಕ್ಕೆ ಆಹ್ವಾನ ನೀಡಿದರೆ ನಾನು ಹೈದರಾಬಾದ್ ನಲ್ಲಿ ಇದ್ದೇನೆ. ನನಗೆ ಬರಲು ಟೈಂ ಇಲ್ಲ ಎಂದಿದ್ದಾರೆ. ಕನ್ನಡದವರೇ ಆಗಿ ಕನ್ನಡ ಸಿನಿಮಾ ಕಾರ್ಯಕ್ರಮಕ್ಕೆ ಈ ರೀತಿ ಹೇಳಿದರೆ ಇಂತವರಿಗೆ ಬುದ್ಧಿಕಲಿಸುವುದು ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರಿಗೆ ಸಿಸಿಎಲ್ ಕ್ರಿಕೆಟ್ ಆಡಲು ಹೋಗಲು ಆಗುತ್ತೆ, ಇಲ್ಲಿನ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಆಗಲ್ಲ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೆ. ಸದ್ಯಕ್ಕೆ ಸಿಸಿ ಎಲ್ ಕ್ರಿಕೆಟ್ ನಿಲ್ಲಿಸಿ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದು ಅವರಿಗೆ ನಾನು ಮಾಡುವ ಲಾಸ್ಟ್ ವಾರ್ನಿಂಗ್. ಸಿನಿಮಾದವರಿಗೆ ಸಬ್ಸಿಡಿ ನಿಲ್ಲಿಸಿ ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ. ಖುದ್ದು ಭೇಟಿಯಾಗಿ ಹೇಳುತ್ತೇನೆ. ಚಿತ್ರೋತ್ಸವದಲ್ಲಿ, ಮೇಕೆದಾಟು ಹೋರಾಟದಲ್ಲಿ ಚಿತ್ರರಂಗದವರು ಭಾಗವಹಿಸಿಲ್ಲ ಎಂದಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತು ಸರಿಯಲ್ಲ ಎಂದಿದ್ದಾರೆ. ಇಂತವರಿಗೆ ಬುದ್ಧಿಕಲಿಸಬೇಕಾ ಬೇಡವಾ? ಎಂದು ಕಿಡಿಕಾರಿದ್ದಾರೆ.
ಸಿನಿಮಾ ಸಬ್ಸಿಡಿಗಳನ್ನು ನಿಲ್ಲಿಸುವ ಬಗ್ಗೆ ಯೋಚಿಸಬೇಕು. ಆಂಧ್ರದ ನರಸಿಂಹಲು ಡಿ ಕೆ ಶಿವಕುಮಾರ್ ವಿರುದ್ಧ ಮಾತನಾಡುತ್ತಾನೆ. ಆಂಧ್ರಪ್ರದೇಶದಿಂದ ಬಂದು ದುಡ್ಡು ದೋಚಿಕೊಂಡು ಹೋಗಿ, ನಮ್ಮ ಬಗ್ಗೆ ಮಾತನಾಡುತ್ತಾನೆ. ಮೊನ್ನೆ ಸಿಸಿಎಲ್ ಮ್ಯಾಚ್ ನಡೀತು ಅಲ್ವಾ, ಆಗ ನಿಲ್ಲಿಸಬೇಕಿತ್ತು. ಇದು ಲಾಸ್ಟ್ ವಾರ್ನಿಂಗ್. ಚಲನಚಿತ್ರ ಮಂಡಳಿಯವರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಶಾಸಕ ಗಣಿಗ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಕನ್ನಡ ಚಲನಚಿತ್ರ ನಟರು ಗೈರುಹಾಜರಾಗಿದ್ದಕ್ಕಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಈ ಭಾವನೆಯನ್ನು ಹಂಚಿಕೊಳ್ಳದಿದ್ದರೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅರ್ಥವೇನು? ಸಿನಿಮಾ ಕೆಲವರಿಗೆ ಮಾತ್ರ ಸೀಮಿತವಾಗಿಲ್ಲ - ಸರ್ಕಾರದ ಬೆಂಬಲ ನಿರ್ಣಾಯಕವಾಗಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದರು.












Click it and Unblock the Notifications