ಆಸ್ತಿ ಮಾರಿ ಚುನಾವಣೆಗೆ ನಿಂತ ನರಸಿಂಹಯ್ಯ

ರಾಮನಗರ-ಮೇ.22-ಮಹಾಭಾರತದಲ್ಲಿ ಚದುರಂಗದಾಟವಾಡಲು ಧರ್ಮರಾಯ ದ್ರೌಪದಿಯನ್ನ ಪಣಕ್ಕಿಟ್ಟಿದ್ದು ಪುರಾಣದ ಕಥೆ..... ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗಾಗಿ ಬಾಜಿ ಕಟ್ಟಲು ಹಣ, ಆಸ್ತಿ, ಮನೆ, ವಾಹನಗಳನ್ನೆಲ್ಲ ಪಣಕ್ಕಿಡುತ್ತಿದ್ದಾರೆ..... ಈಗ ಬೆಂಗಳೂರು ಹಾಲು ಒಕ್ಕೂಟ(ಬಮೂಲ್)ದ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಜಮೀನು, ಖಾಲಿ ನಿವೇಶನವನ್ನೆಲ್ಲಾ ಮಾರಾಟ ಮಾಡಿಕೊಂಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನರಸಿಂಹಯ್ಯ(ಬೋರ್‍ವೆಲ್) ಆಸ್ತಿಯನ್ನೆಲ್ಲಾ ಮಾರಿಕೊಂಡು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿಯ ಬಮೂಲ್ ಚುನಾವಣೆಯಲ್ಲಿ ಸುಮಾರು 40 ಲಕ್ಷದಷ್ಟು ಹಣವನ್ನ ಚುನಾವಣೆಗೆ ಖರ್ಚು ಮಾಡಿದ್ದರು. ಚುನಾವಣೆಗೆ ಖರ್ಚಿಗಾಗಿ ಕಲ್ಯಾದ ಬಳಿ ಇರುವ ಜಮೀನನ್ನ 20 ಲಕ್ಷಕ್ಕೆ ಮಾರಾಟ ಮಾಡಿಕೊಂಡಿದ್ದರು. ಮಿಕ್ಕಂತೆ 10 ಲಕ್ಷ ಹಣವನ್ನ ಸಾಲ ಪಡೆದುಕೊಂಡು ಕಳೆದ 5 ವರ್ಷಗಳಿಂದ ಬಡ್ಡಿ ಕಟ್ಟಿ ಸಾಲವನ್ನ ಚುಕ್ತಾ ಮಾಡಿದ್ದರು.

ಕಳೆದ ಬಾರಿ 40 ಲಕ್ಷ ಖರ್ಚು ಮಾಡಿದ್ದರೂ ಪರಾಜಿತರಾಗಿದ್ದ ನರಸಿಂಹಯ್ಯ ಈ ಬಾರಿಯೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಬಮೂಲ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೈಯಲ್ಲಿ ಕಾಸಿಲ್ಲದಿದ್ದರೂ ಸಾಲಸೋಲ ಮಾಡಿಯಾದರೂ ಚುನಾವಣೆ ಎದುರಿಸಬೇಕೆಂದು ತೀರ್ಮಾನ ಮಾಡಿರುವ ನರಸಿಂಹಯ್ಯ ಮಾಗಡಿ ಪಟ್ಟಣದ ಕಲ್ಯಾಗೇಟ್‍ನಲ್ಲಿದ್ದ 2 ಖಾಲಿ ನಿವೇಶನಗಳನ್ನ 20 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಜತೆಗೆ ಪತ್ನಿಯ ಬಳಿ ಇದ್ದ 300 ಗ್ರಾಂ ಚಿನ್ನದ ಒಡವೆಗಳನ್ನ ಕೂಡ 8 ಲಕ್ಷಕ್ಕೆ ಮಾರಾಟ ಮಾಡಿಕೊಂಡಿರುವುದು ಗುಟ್ಟಾಗೇನು ಉಳಿದಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನರಸಿಂಹಮೂರ್ತಿಯವರು ಆರ್ಥಿಕವಾಗಿ ಸಾಕಷ್ಟು ಸಧೃಢವಾಗಿರುವುದರಿಂದ ಅವರಿಗೆ ತಕ್ಕ ಪೈಪೋಟಿ ನೀಡಲು ನರಸಿಂಹಯ್ಯನವರಿಗೆ ಆಸ್ತಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್ಥಿಕ ಕ್ರೋಡೀಕರಣದ ಸಮಸ್ಯೆ ನರಸಿಂಹಯ್ಯನವರಿಗೆ ಎದುರಾಗಿರುವುದರಿಂದ ಇರೋ ಬರೋ ಆಸ್ತಿ ಒಡವೆಯನ್ನೆಲ್ಲಾ ನರಸಿಂಹಯ್ಯ ಮಾರಾಟ ಮಾಡಿಕೊಂಡಿದ್ದಾರೆಂಬುದು ಜಗಜ್ಜಾಹೀರಾಗಿದೆ.

Ramanagara Nandini Bamul election unique candidate

ನರಸಿಂಹಯ್ಯ ಬೋರ್‍ವೆಲ್ ಮೋಟಾರ್‍ಗಳನ್ನ ರಿಪೇರಿ ಮಾಡುವ ವೃತ್ತಿಯೊಂದಿಗೆ ಕೊಳವೆಬಾವಿಗಳನ್ನ ಕೊರೆಸುವ ಲಾರಿಗಳ ಬೇರೆಡೆಯಿಂದ ಕರೆಯಿಸಿಕೊಂಡು ಅಷ್ಟೋ ಇಷ್ಟೋ ಲಾರಿ ಮಾಲೀಕರಿಂದ ಕಮೀಷನ್ ಪಡೆದುಕೊಳ್ಳುತ್ತಿದ್ದರು. ಕೂಡಿಟ್ಟದ್ದ ಹಣವನ್ನೆಲ್ಲಾ ಈ ಬಾರಿಯೂ ಚುನಾವಣೆಗೆ ಸುರಿಯುತ್ತಿದ್ದಾರೆ. ಕಾಂಗ್ರೆಸ್ ಪಡಸಾಲೆಯಿಂದ ನರಸಿಂಹಯ್ಯರಿಗೆ ಅಷ್ಟೇನೂ ಆರ್ಥಿಕ ಸಹಾಯ ದೊರಕಿಲ್ಲವೆಂಬುದು ಕೂಡ ಗುಟ್ಟಾಗೇನು ಉಳಿದಿಲ್ಲ.

''ನೀರಿಗೆ ಇಳಿದುಬಿಟ್ಟಿದ್ದೇನೆ, ಮುಳುಗಲು ನನ್ನಿಂದ ಸಾಧ್ಯವಿಲ್ಲ, ಈಜಿ ದಡ ಸೇರಲೇಬೇಕಾದ ಅನಿವಾರ್ಯತೆ ಇರುವುದರಿಂದ ನಾನು ಸೈಟ್ ಒಡವೆಗಳನ್ನ ಮಾರಾಟ ಮಾಡಿ ಚುನಾವಣೆ ಎದುರಿಸುತ್ತಿದ್ದೇನೆಂದು ನರಸಿಂಹಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ''. ನರಸಿಂಹಯ್ಯರ ಆತ್ಮೀಯ ವಲಯದಲ್ಲಿರುವುವರು ಕೂಡ ಆಢಳಿತಾರೂಢ ಕಾಂಗ್ರೆಸ್‍ನ ಸಾಧನೆ, ಸಂಸದ ಡಿ.ಕೆ.ಸುರೇಶ್‍ರ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಬಮೂಲ್ ಚುನಾವಣೆಯನ್ನ ಎದುರಿಸುತ್ತಿದ್ದಾರೆ.

ಕೋಟಿ ಖರ್ಚು : ಮಾಗಡಿ ತಾಲ್ಲೂಕಿನಲ್ಲಿ ಒಟ್ಟು 218 ಮಂದಿ ಬಮೂಲ್‍ನ ಮತದಾರರಿದ್ದಾರೆ. ಒಂದೊಂದು ಮತವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನರಸಿಂಹಮೂರ್ತಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನರಸಿಂಹಯ್ಯ ಇಬ್ಬರೂ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಒಂದೊಂದು ಮತಕ್ಕೆ ಸುಮಾರು 30 ರಿಂದ 50 ಸಾವಿರದವರೆಗೂ ಖರ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಒಬ್ಬೊಬ್ಬ ಅಭ್ಯರ್ಥಿ ಒಂದೊಂದು ಕೋಟಿ ರೂಪಾಯಿಯಷ್ಟು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು ಹೇಳುತ್ತಿದ್ದಾರೆ.

ಗುರುತು : ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನರಸಿಂಹಯ್ಯರಿಗೆ ''ಟಿ.ವಿ''(ಟೆಲಿವಿಷನ್) ಗುರುತು ಕ್ರಮಸಂಖ್ಯೆ 2 ಸಿಕ್ಕಿದೆ. ಇನ್ನೂ ಹ್ಯಾಟ್ರಿಕ್ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸ್ಪರ್ಧೆಗೆ ಇಳಿದಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನರಸಿಂಹಮೂರ್ತಿಯವರಿಗೆ ''ಆಟೋ'' ಗುರುತು ಕ್ರಮಸಂಖ್ಯೆ 1 ಸಿಕ್ಕಿದೆ. ನರಸಿಂಹಯ್ಯರಂತೂ ಟೆಲಿವಿಷನ್ ಗುರುತು ಪಡೆಯಲೇಬೇಕೆಂದು ಪಡೆದಿದ್ದಾರೆ.

ದೇವರು ಜ್ಯೋತಿಷ್ಯಕ್ಕೆ ಮೊರೆ ಹೋದವರು : ಜಿದ್ದಾಜಿದ್ದಿನ ಅಖಾಡವಾಗಿರುವ ಮಾಗಡಿ ಬಮೂಲ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳು ಈಗಾಗಲೇ ದೇವರುಗಳನ್ನ ಮೊರೆಹೋಗಿದ್ದಾರೆ. ಪ್ರತಿಹೆಜ್ಜೆ ಇಡಬೇಕಾದರೂ ಜ್ಯೋತಿಷಿಗಳ ಮಾತುಗಳನ್ನ ಕೇಳುತ್ತಿದ್ದಾರೆ. ಹಣೆಯಲ್ಲಿ ಕುಂಕುಮ ಇಟ್ಟುಕೊಂಡೇ ದೇವರ ಮೇಲೆ ಬಾರ ಹಾಕಿ ಅಭ್ಯರ್ಥಿಗಳು ಚುನಾವಣೆ ನಡೆಸುತ್ತಿದ್ದಾರೆ.

ನರಸಿಂಹಮೂರ್ತಿಯವರಿಗೆ 3 ಅವಧಿಯಲ್ಲಾಗಿರುವ ಕೆಲಸವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ನರಸಿಂಹಯ್ಯನವರು ಸಿಂಫಥಿ ಫ್ಯಾಕ್ಟರ್ ಜತೆಗೆ ಕಾಂಗ್ರೆಸ್‍ನ ಅಭಿವೃದ್ಧಿಯನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ನರಸಿಂಹಯ್ಯ ಗೆದ್ದರಷ್ಟೇ ಉಳಿಗಾಲ, ಎಡವಟ್ಟಾದರೆ ಬರ್ಬಾದ್ ಆಗುವುದರಲ್ಲಿ ಸಂಶಯವೇ ಇಲ್ಲವೆಂಬುದು ನರಸಿಂಹಯ್ಯರ ಆತ್ಮೀಯರೇ ಮಾತನಾಡಿಕೊಳ್ಳುತ್ತಿದ್ದಾರೆ.

''ನರಸಿಂಹ''ದ್ವಯರಲ್ಲಿ ಮೇ 25ರ ಚುನಾವಣೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆಂಬುದು ಮಾತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+