ಸಿದ್ದರಾಮಯ್ಯ ಬಣದ ಯುವ ನಾಯಕನಿಗೆ ರಾಷ್ಟ್ರ ಮಟ್ಟದ ಜವಾಬ್ದಾರಿ
ಬೆಂಗಳೂರು, ಜು. 03: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೆಚ್ಚಿನ ಯುವ ನಾಯಕ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
"ರಕ್ಷಾ ರಾಮಯ್ಯ ಅವರೇ, ನೀವು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಪಕ್ಷಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಮಾಡಲಾಗಿದೆ. ಪಕ್ಷದ ಡೈನಾಮಿಕ್ ನಾಯಕ ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಕಟ್ಟಲು ಪ್ರಯತ್ನಿಸಿ," ಎಂದು ಹಾರೈಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಕ್ಷಾ ರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ನಲ್ಲಿ ತನ್ನ ಸರಳ - ಸೌಮ್ಯ ವ್ಯಕ್ತಿತ್ವದ ಮೂಲಕವೇ ಗುರುತಿಸಿಕೊಂಡಿದ್ದರು. ಕಳೆದ ಬಾರಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಈ ವೇಳೆ ಮಹಮದ್ ನಲಪಾಡ್ ಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಯತ್ನಿಸಿದ್ದರು. ಆದರೆ ಸಿದ್ದರಾಮಯ್ಯ ಅವರೇ ಮೇಲುಗೈ ಸಾಧಿಸಿದ್ದರು. ರಕ್ಷಾ ರಾಮಯ್ಯ ಅವರಿಗೆ ಮೊದಲ ಅವಧಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಕ್ಷಾ ರಾಮಯ್ಯ ಅವರ ಅವಧಿ ಮುಗಿದ ನಂತರ ಮಹಮದ್ ನಲಪಾಡ್ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ರಾಜ್ಯ ಮಟ್ಟದ ನಾಯಕನಾಗಿದ್ದ ರಕ್ಷಾ ರಾಮಯ್ಯ ಇದೀಗ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಸಿದ್ದು ಬಣದಲ್ಲಿ ಸಂತಸ ಮನೆ ಮಾಡಿದೆ.

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹದ್ದೆಗೆ ನೇಮಕಗೊಂಡಿರುವ ರಕ್ಷಾ ರಾಮಯ್ಯ ಅವರಿಗೆ ಅಭಿನಂದನೆಗಳು. ಪಕ್ಷ ಸಂಘಟನೆ ಮತ್ತು ಜನ ಪರ ಹೋರಾಟಗಳ ತಮ್ಮ ಕಾರ್ಯ ಎಂದಿನಂತೆ ಮುಂದುವರೆಯಲಿ. ಕಾಂಗ್ರೆಸ್ ಪಕ್ಷ ನಿಮ್ಮ ಬೆಂಬಲಕ್ಕೆ ಇರಲಿದೆ ಎಂದು ಹಾರೈಸಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾಗಿ ನೇಮಕವಾಗಿರುವುದು ನಲಪಾಡ್ ಬಣಕ್ಕೆ ಶಾಕ್ ನೀಡಿದೆ.












Click it and Unblock the Notifications