ರಾಜ್ಯಸಭಾ ಚುನಾವಣೆ: ಕಣದಲ್ಲಿರುವ ಆರು ಅಭ್ಯರ್ಥಿಗಳಲ್ಲಿ ಕುಬೇರ ಕುಪೇಂದ್ರರೆಡ್ಡಿ!
ಬೆಂಗಳೂರು, ಜೂ. 01: ರಾಜ್ಯ ಸಭಾ ಚುನಾವಣ ಕಣಕ್ಕೆ ಇಳಿದಿರುವ ಜೆಡಿಎಸ್ ಅಭ್ಯರ್ಥಿ ಡಿ. ಕುಪೇಂದ್ರರೆಡ್ಡಿ 817 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಸಭಾ ಚುನಾವಣಾ ಕಣದಲ್ಲಿರುವ ಶ್ರೀಮಂತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ ದ್ವಿತೀಯ ಪಿಯುಸಿ ಪಾಸು ಮಾಡಿರುವ ಕುಪೇಂದ್ರರೆಡ್ಡಿ ಐಟಿ ಕಂಪನಿಗಳ ಮೂಲ ಸೌಕರ್ಯ ಅಭಿವೃದ್ಧಿ, ರಿಯಲ್ ಎಸ್ಟೇಟ್ ಸೇರಿದಂತೆ ಬಹುದೊಡ್ಡ ಉದ್ಯಮಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಎಂಟು ವರ್ಷದ ಹಿಂದೆ ಕುಪೇಂದ್ರರೆಡ್ಡಿ ಅವರು 462 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಎಂಟು ವರ್ಷಕ್ಕೆ ಹೋಲಿಸಿದರೆ ಶೇ. 76 ರಷ್ಟು ಆದಾಯ ವೃದ್ಧಿಯಾಗಿದೆ.
ಐಟಿ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಉದ್ಯಮ ಹೊಂದಿರುವ ಕುಪೇಂದ್ರರೆಡ್ಡಿ ಅವರ ಕುಟುಂಬದ ಚರಾಸ್ತಿ ಮೌಲ್ಯ 417 ಕೋಟಿ ರೂ. ಚರಾಸ್ತಿ 399 ಕೋಟಿ ರೂ. ಎಂದು ರಾಜ್ಯ ಸಭಾ ಚುನಾವಣೆಗೆ ನಾಪಪತ್ರ ಜತೆ ಸಲ್ಲಸಿರುವ ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ.

ಕುಪೇಂದ್ರರೆಡ್ಡಿ ಅವರು ಚರಾಸ್ತಿ 2014 ರಿಂದ 2022 ರ ಅವಧಿಯಲ್ಲಿ ಶೇ. 198 ರಷ್ಟು ಹೆಚ್ಚಾಗಿದೆ. 139 ಕೋಟಿ ಮೌಲ್ಯದ ಚರಾಸ್ತಿ ಮೌಲ್ಯ ಇದೀಗ 417 ಕೋಟಿ ರೂ.ಗೆ ಏರಿಕೆಯಾಗಿದೆ. ಕುಪೇಂದ್ರರೆಡ್ಡಿ ಅವರು ಸುಮಾರು ಜನರಿಗೆ ಲೋನ್ ಮತ್ತು ಮುಂಗಡ ಹಣ ನೀಡಿರುವುದು ಪ್ರಮಾಣ ಪತ್ರದಲ್ಲಿ ನಮೂದಾಗಿದೆ. ಕುಪೇಂದ್ರರೆಡ್ಡಿ ಅವರು 109 ಕೋಟಿ ರೂ. ಸಾಲ ಹೊಂದಿದ್ದಾರೆ.
ಕೆ. ರಹಮಾನ್ ಖಾನ್ ಅವರ ಪುತ್ರ , ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿಖಾನ್ ಅವರು ಕುಟುಂಬ ಆಸ್ತಿ 58 ಕೋಟಿ ರೂ. ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಆಸ್ತಿಗೆ ಹೊಲಿಸದ್ರೆ ಕುಪೇಂದ್ರರೆಡ್ಡಿ ಹೊಂದಿರುವ ಕಾಲು ಭಾಗ ಆಸ್ತಿಗೂ ಸಮವಾಗುವುದಿಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2.50 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. 2016 ರಲ್ಲಿ 1.35 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದ ನಿರ್ಮಲಾ ಸೀತಾರಾಮನ್ ಅವರ ಆಸ್ತಿ ಅರು ವರ್ಷದಲ್ಲಿ ದುಪ್ಪಟ್ಟು ಆಗಿದೆ. ವಿಶೇಷ ಅಂದ್ರೆ ನಿರ್ಮಲಾ ಸೀತಾರಾಮನ್ 2001 ಮಾಡಲ್ ಬಜಾಜ್ ಚೇತಕ್ ವಾಹನ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 2016 ರಲ್ಲಿ ಪತಿ ಪರಕಾಲ ಪ್ರಭಾಕರ್ ಅವರ ಆಸ್ತಿ ವಿವರ ತೋರಿಸಿದ್ದ ನಿರ್ಮಲಾ ಸೀತಾರಾಮನ್ ಈ ಭಾರಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪತಿಯ ಆಸ್ತಿಯ ವಿವರ ಉಲ್ಲೇಖಿಸಿಲ್ಲ.
ಕಾಂಗ್ರೆಸ್ ನ ಮಾಜಿ ಸಚಿವ ಜಯರಾಮ್ ರಮೇಶ್ ಅವರು 4.56 ಮೊತ್ತದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 2016 ರಲ್ಲಿ ಜಯರಾಮ್ ರಮೇಶ್ ಅವರು 4.83 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೊಷಣೆ ಮಾಡಿಕೊಂಡಿದ್ದರು. ಆದರೆ ಅವರ ಆಸ್ತಿ ಆರು ವರ್ಷಕ್ಕೆ ಹೋಲಿಸಿದ್ರೆ ಕಡಿಮೆಯಾಗಿದೆ. ಮೃತಪಟ್ಟಿರುವ ಪತ್ನಿಯ ಆಸ್ತಿಯನ್ನು ಸಹ ಜಯರಾಮ ರಮೇಶ್ ಘೋಷಣೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ, ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ ಲೆಹರ್ ಸಿಂಗ್ ಸಿರೋಯ ಅವರ ಕುಟುಂಬದ ಆಸ್ತಿ 54 ಕೋಟಿ ರೂ. ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ನಟ ಜಗ್ಗೇಶ್ 22 ಕೋಟಿ ರೂ. ಘೋಷಣೆ ಮಾಡಿಕೊಂಡಿದ್ದಾರೆ. ಕಣದಲ್ಲಿರುವ ಆರು ಅಭ್ಯರ್ಥಿಗಳಲ್ಲಿ ಕುಪೇಂದ್ರ ರೆಡ್ಡಿಯ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications